ಕ್ರೀಡೆ

ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​ ಮಾಡಲ್ಲ; ಹೀಗಿದೆ ಕಾರಣ...

ಹೈದರಾಬಾದ್​: ಕನ್ನಡಿಗ ಕೆಎಲ್​ ರಾಹುಲ್​ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಮುಂಬರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವರು ವಿಕೆಟ್​ ಕೀಪಿಂಗ್​ ಮಾಡಲ್ಲ. ಬರೀ ಬ್ಯಾಟರ್​ ಆಗಿ ಆಡಲಿದ್ದಾರೆ ಎಂದು ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಮಂಗಳವಾರ ಸ್ಪಷ್ಟಪಡಿಸಿದರು. ಇದರಿಂದ ಕೆಎಸ್​ ಭರತ್​ ಮತ್ತು ಧ್ರುವ ಜುರೆಲ್​ ಅವರಲ್ಲೇ ಒಬ್ಬರು ವಿಕೆಟ್​ ಕೀಪಿಂಗ್​ ನಿರ್ವಹಿಸುವುದು ಖಚಿತವೆನಿಸಿದೆ.

ತವರಿನ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್​ ಕೀಪರ್​&ಬ್ಯಾಟರ್​ ಆಗಿ ಆಡಿ ಉತ್ತಮ ಯಶಸ್ಸು ಸಂಪಾದಿಸಿದ್ದ ರಾಹುಲ್​, ದ. ಆಫ್ರಿಕಾ ಪ್ರವಾಸದಲ್ಲಿ ಇಶಾನ್​ ಕಿಶನ್​ ಮಾನಸಿಕ ಆರೋಗ್ಯದ ಕಾರಣ ನೀಡಿ ತವರಿಗೆ ಮರಳಿದಾಗ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲೂ ವಿಕೆಟ್​ ಕೀಪಿಂಗ್​ ನಿರ್ವಹಿಸಿ ಉತ್ತಮ ಪ್ರದರ್ಶನ ತೋರಿದ್ದರು.

"ಇಂಗ್ಲೆಂಡ್​ ವಿರುದ್ಧ ರಾಹುಲ್​ರನ್ನು ಕೀಪರ್​ ಆಗಿ ಆಡಿಸುವುದಿಲ್ಲ ಎಂದು ತಂಡ ಆಯ್ಕೆಯ ವೇಳೆಯೇ ನಾವು ಸ್ಪಷ್ಟತೆ ಹೊಂದಿದ್ದೆವು. ಅದಕ್ಕಾಗಿಯೇ ಇಬ್ಬರು ಕೀಪರ್​ಗಳನ್ನು ಆರಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ರಾಹುಲ್​ ಅಮೋ ನಿರ್ವಹಣೆ ತೋರಿದ್ದರು ಮತ್ತು ಸರಣಿ ಸಮಬಲ ಸಾಧಿಸಲು ಕೂಡ ನೆರವಾಗಿದ್ದರು. ಆದರೆ ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ 5 ಪಂದ್ಯಗಳು ನಡೆಯಲಿವೆ. ಹೀಗಾಗಿ ಇಲ್ಲಿನ ವಾತಾವರಣದಲ್ಲಿ ಇತರ ಇಬ್ಬರು ಕೀಪರ್​ಗಳಲ್ಲೇ ಒಬ್ಬರನ್ನು ಆಡಿಸಲಿದ್ದೇವೆ' ಎಂದು ದ್ರಾವಿಡ್​ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಭಾರತದ ಸ್ಪಿನ್​ ಸ್ನೇಹಿ ಪಿಚ್​ಗಳಲ್ಲಿ ಕೀಪರ್​ಗಳು ವಿಕೆಟ್​ ಬಳಿ ಹೆಚ್ಚಿನ ಸಮಯ ಇರಬೇಕಾಗುತ್ತದೆ. ಅಲ್ಲದೆ ಆರ್​. ಅಶ್ವಿನ್​, ರವೀಂದ್ರ ಜಡೇಜಾ ಅವರಂಥ ಗುಣಮಟ್ಟದ ಸ್ಪಿನ್ನರ್​ಗಳ ಎದುರು ತಜ್ಞ ವಿಕೆಟ್​ ಕೀಪರ್​ ಆಡಿಸುವುದೇ ಉತ್ತಮ ಆಯ್ಕೆ ಎನಿಸಿದೆ. ದಣ ಆಫ್ರಿಕಾ ಸರಣಿಗೆ ಮುನ್ನ ಕೆಎಲ್​ ರಾಹುಲ್​ ತಾನಾಡಿದ 92 ಪ್ರಥಮ ದರ್ಜೆ ಪಂದ್ಯಗಳಲ್ಲಿ 3ರಲ್ಲಿ ಮಾತ್ರ ವಿಕೆಟ್​ ಕೀಪರ್​ ಆಗಿದ್ದರು. ಇಂಗ್ಲೆಂಡ್​ ಈಗ "ಬಜ್​ಬಾಲ್​' ಎಂಬ ಹೊಸ ಆಕ್ರಮಣಕಾರಿ ಕಾರ್ಯತಂತ್ರದೊಂದಿಗೆ ಆಡುತ್ತಿದೆ. ಹೀಗಾಗಿ ಕೀಪರ್​ ಒಂದೆರಡು ಕ್ಯಾಚ್​ಗಳನ್ನು ಮಿಸ್​ ಮಾಡಿಕೊಂಡರೂ, ತಂಡಕ್ಕೆ ಅಪಾಯವಾಗುವ ಭೀತಿ ಇರುತ್ತದೆ.

ಕೀಪಿಂಗ್​ಗೆ ಭರತ್​ ಫೇವರಿಟ್​

ರಿಷಭ್​ ಪಂತ್​ ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಅವರ ಸ್ಥಾನದಲ್ಲಿ ಆಡಿರುವ ಕೆಎಸ್​ ಭರತ್​ ಬ್ಯಾಟಿಂಗ್​ನಲ್ಲಿ ಗಮನಸೆಳೆಯದಿದ್ದರೂ, ಕೀಪರ್​ ಆಗಿ ಉತ್ತಮ ನಿರ್ವಹಣೆಯನ್ನೇ ತೋರಿದ್ದರು. 91 ಪ್ರಥಮ ದರ್ಜೆ ಪಂದ್ಯಗಳಲ್ಲೂ ಕೀಪಿಂಗ್​ ನಿರ್ವಹಿಸಿದ ಅನುಭವ ಹೊಂದಿದ್ದಾರೆ ಮತ್ತು 287 ಕ್ಯಾಚ್​ ಹಿಡಿದಿದ್ದಾರೆ ಮತ್ತು 33 ಸ್ಟಂಪಿಂಗ್​ ಮಾಡಿದ್ದಾರೆ. ತಂಡದ ಇನ್ನೋರ್ವ ಕೀಪರ್​ ಆಗಿರುವ 23 ವರ್ಷದ ಧ್ರುವ ಜುರೆಲ್​ ಇದುವರೆಗೆ 15 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಹೀಗಾಗಿ ಇತ್ತೀಚೆಗೆ ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಚತುರ್ದಿನ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ಎ ತಂಡಕ್ಕೆ ಡ್ರಾ ಸಾಧಿಸಲು ನೆರವಾಗಿದ್ದ ಭರತ್​ ಮೊದಲ ಟೆಸ್ಟ್​ನಲ್ಲಿ ಕೀಪರ್​ ಆಗಿ ಕಣಕ್ಕಿಳಿಯುವ ನಿರೀಕ್ಷೆ ಹೆಚ್ಚಿದೆ.