ಕ್ರೀಡೆ

ಪಂಜಾಬ್​ ತಂಡದ ವಿಕೆಟ್​ ಕೀಪಿಂಗ್​ ಜವಾಬ್ದಾರಿಯೂ ಕೆಎಲ್​ ರಾಹುಲ್​ ಹೆಗಲಿಗೆ..

ಬೆಂಗಳೂರು: ಕರೊನಾ ವೈರಸ್​ ಭೀತಿ ನಡುವೆಯೂ ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್​ಗೆ ಯುಎಇಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಕಳೆದ ನಾಲ್ಕೂ ದಿನಗಳಿಂದ ತಂಡಗಳು ಕಠಿಣ ಅಭ್ಯಾಸದ ಮೊರೆ ಹೋಗಿವೆ. ಕೋವಿಡ್​-19 ರಿಂದ ಕಳೆದ 5 ತಿಂಗಳಿಂದ ಖಾಲಿ ಇದ್ದ ಕ್ರಿಕೆಟಿಗರು ಇದೀಗ ನೆಟ್ಸ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಜತೆಗೆ ಸೆ.19 ರಿಂದ ಆರಂಭಗೊಳ್ಳಲಿರುವ ಲೀಗ್​ಗೆ ತಂಡದ ಸಂಯೋಜನೆಯಲ್ಲಿ ತೊಡಗಿವೆ. ಕನ್ನಡಿಗರ ಪ್ರಾಬಲ್ಯ ಹೊಂದಿರುವ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಮುಖ್ಯಕೋಚ್​ ಅನಿಲ್​ ಕುಂಬ್ಳೆ ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿ ನಾಯಕತ್ವ ಜವಾಬ್ದಾರಿ ಹೊತ್ತಿರುವ ರಾಹುಲ್​ ಅವರೇ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಕರೊನಾ ವೈರಸ್​ ಅಬ್ಬರಕ್ಕೂ ಮೊದಲು ನ್ಯೂಜಿಲೆಂಡ್​ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿ ವೇಳೆ ರಾಹುಲ್​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸಿದ್ದರು. ವಿಕೆಟ್​ ಕೀಪಿಂಗ್​ನಲ್ಲೂ ಪಕ್ವತೆ ಹೊಂದಿರುವ ರಾಹುಲ್​, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕತ್ವದೊಂದಿಗೆ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊರಲು ಸಿದ್ಧವಾಗಿದ್ದಾರೆ. ವೆಸ್ಟ್​ ಇಂಡೀಸ್​ ವಿಕೆಟ್​ ಕೀಪರ್​ ಕಮ್​ ಸ್ಫೋಟಕ ಬ್ಯಾಟ್ಸ್​ ಮನ್​ ನಿಕೋಲಸ್​ ಪೂರನ್​ 2ನೇ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಕ್ರಿಕೆಟಿಗರಾಗಿ ಬೆಳೆದಿರುವ ಹುಡುಗರು, ಕಳೆದ 2 ಆವೃತ್ತಿಗಳಿಂದ ಪಂಜಾಬ್​ ತಂಡದಲ್ಲಿದ್ದಾರೆ. ನಾಯಕತ್ವದ ಜತೆಗೆ ವಿಕೆಟ್​ ಕೀಪಿಂಗ್​ ಅವರೇ ನಿಭಾಯಿಸಿದರೆ, ಬೌಲಿಂಗ್​ ವಿಭಾಗವನ್ನು ವೇಗಿ ಮೊಹಮದ್​ ಶಮಿ ನಿಭಾಯಿಸುವರು ಎಂದು ಕುಂಬ್ಳೆ ಹೇಳಿದ್ದಾರೆ. ..

2008ರಿಂದಲೂ ಪಂಜಾಬ್​ ತಂಡ ಲೀಗ್​ನಲ್ಲಿ ಆಡುತ್ತಿದ್ದು, ಒಮ್ಮೆ ಮಾತ್ರ ಫೈನಲ್​​ ಪ್ರವೇಶಿಸಿದೆ. 2014ರಲ್ಲಿ ಬೆಂಗಳೂರಿನಲ್ಲಿ ನಡೆದ ಫೈನಲ್​ನಲ್ಲಿ ಕೆಕೆಆರ್​ ತಂಡಕ್ಕೆ ಶರಣಾಗಿತ್ತು.