ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆಯ ವೇಳೆ ಗಾಯಗೊಂಡಿದ್ದ ಲಖನೌ ಸೂಪರ್ ಜೇಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ರಾಹುಲ್ ಅವರ ಬಲ ತೊಡೆಗೆ ನೋವಾಗಿತ್ತು. ಮಂಗಳವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ರಾಹುಲ್, ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ, ಆದಷ್ಟು ಬೇಗ ಮೈದಾನಕ್ಕೆ ಮರಳುವುದಾಗಿ ರಾಹುಲ್ ಹೇಳಿದ್ದಾರೆ.
ಮೇ 1ರಂದು ಲಖನೌದ ಎಕಾನಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ವೇಳೆ ರಾಹುಲ್ ಅವರ ಬಲ ತೊಡೆಗೆ ನೋವಾಗಿತ್ತು. ಸ್ನಾಯು ಸೆಳೆತವಾಗಿ ತುಂಬಾ ನೋವಿನಿಂದ ಬಳಲಿದರು. ಆರ್ಸಿಬಿ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಾಗಿತ್ತು. ಆದರೆ, ರಾಹುಲ್ ಗಾಯಗೊಂಡಿದ್ದರಿಂದ ಪಂದ್ಯವನ್ನು ಕೈಚೆಲ್ಲ ಬೇಕಾಯಿತು.
ನೋವಿನ ಕಾರಣ ರಾಹುಲ್, ಪಂದ್ಯಗಳಿಂಗ ಹೊರಗುಳಿಯಬೇಕಾಯಿತು. ಅಲ್ಲದೆ, ಮುಂದಿನ ತಿಂಗಳು ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದಲೂ ರಾಹುಲ್ ಹೊರಗುಳಿದಿದ್ದಾರೆ. ಅವರ ಬದಲಾಗಿ ಇಶಾನ್ ಕಿಶನ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗುತ್ತಿರುವ ರಾಹುಲ್, ಮರಳಿ ತಂಡವನ್ನು ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ನನ್ನ ಶಸ್ತ್ರಚಿಕಿತ್ಸೆಯನ್ನು ಮುಗಿಸಿದ್ದೇನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ರಾಹುಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ ಮತ್ತು ಮೈದಾನಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)