ಕ್ರೀಡೆ

ಐಪಿಎಲ್​ ಹರಾಜಿಗೂ ಮುನ್ನವೇ ಸಿಕ್ಕಿತು ಹೊಸ ಸುಳಿವು! ​ಇವರೇ ಆರ್​ಸಿಬಿ ತಂಡಕ್ಕೆ ನೂತನ ಕ್ಯಾಪ್ಟನ್​ | RCB

ಮೋಹನ್​ ಶೆಟ್ಟಿ

ನವದೆಹಲಿ: ಐಪಿಎಲ್​ 18ನೇ ಆವೃತ್ತಿ (IPL 2025) ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್​ಗಳು ಸೇರಿದಂತೆ ಸ್ಟಾರ್​ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್​ನತ್ತ ಎದುರುನೋಡುತ್ತಿರುವ ಒಂದು ಬಾರಿಯೂ ಐಪಿಎಲ್​ನಲ್ಲಿ ಕಪ್​ ಗೆಲ್ಲದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಫ್ರಾಂಚೈಸಿ, ಇದೀಗ ತಮ್ಮ ತಂಡದ ನೂತನ ಕ್ಯಾಪ್ಟನ್​ ಆಗಿ ಕನ್ನಡಿಗ ಕೆ.ಎಲ್​. ರಾಹುಲ್​ರನ್ನು (KL Rahul) ಆಯ್ಕೆ ಮಾಡಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಲಾಗಿದೆ.

ವರದಿಗಳು ಪುಷ್ಠಿ

ಐಪಿಎಲ್​ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಆಯಾ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್​ ಪಟ್ಟಿಯನ್ನು ಇದೇ ಅಕ್ಟೋಬರ್​ 31ರೊಳಗೆ ಐಪಿಎಲ್ ಆಡಳಿತ ಮಂಡಳಿ ಮುಂದೆ ಸಲ್ಲಿಸಬೇಕು. ಸದ್ಯ ಈ ಪಟ್ಟಿಯಲ್ಲಿ ಕಳೆದ ಸೀಸನ್ ಅತ್ಯಂತ ಕಳಪೆ ಪ್ರದರ್ಶನ ತೋರಿದ ಗ್ಲೆನ್ ಮ್ಯಾಕ್ಸ್​ವೆಲ್​ ಮತ್ತು ನಾಯಕ ಫಾಫ್​ ಡು ಪ್ಲೆಸಿಸ್​ರನ್ನು ಫ್ರಾಂಚೈಸಿ ಕೈಬಿಟ್ಟಿದೆ ಎನ್ನಲಾಗಿದೆ. ಫಾಫ್​ಗೆ ಆರ್​ಸಿಬಿ ತಂಡದಲ್ಲಿ ಸ್ಥಾನ ಕಷ್ಟಕರ ಎಂಬ ಸುದ್ದಿ ಒಂದೆಡೆಯಾದರೆ, ಬೆಂಗಳೂರಿನ ಹೈದ, ಸ್ಟಾರ್​ ಬ್ಯಾಟರ್​ ಕೆ.ಎಲ್. ರಾಹುಲ್​ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸೇರುವುದು ಖಚಿತ ಎಂಬ ಸುದ್ದಿ ಮತ್ತೊಂದೆಡೆ. ಇದಕ್ಕೆ ಇತ್ತೀಚಿನ ವರದಿಗಳು ಪುಷ್ಠಿ ನೀಡಿದ್ದು, ಆರ್​ಸಿಬಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನೇ ಹುಟ್ಟುಹಾಕಿದೆ.

ಕ್ಯಾಪ್ಟನ್ ಆಗುವುದರಲ್ಲಿ ಅನುಮಾನವೇ ಬೇಡ

ಲಖನೌ ಸೂಪರ್​ ಜೈಂಟ್ಸ್​ ಫ್ರಾಂಚೈಸಿಯಿಂದ ಹೊರಬರಲಿರುವ ಕೆ.ಎಲ್. ರಾಹುಲ್​, ಐಪಿಎಲ್​ 2025ರಲ್ಲಿ ಖಚಿತವಾಗಿ ಆರ್​ಸಿಬಿ ಪರ ಆಡಲಿದ್ದಾರೆ, ತಂಡದ ಕ್ಯಾಪ್ಟನ್ ಆಗದೆ ಇರಬಹುದು. ಆದರೆ, ಆಡುವುದು ಗ್ಯಾರಂಟಿ ಎಂದು ವರದಿಗಳು ತಿಳಿಸಿತ್ತು. ಈ ಬಗ್ಗೆ ಅಭಿಮಾನಿಗಳು ಅಪಾರ ವಿಶ್ವಾಸ ಹೊಂದಿದ್ದಾರೆ. ಸದ್ಯ ಅದ್ಯಾಕೋ ಇದೆಲ್ಲವೂ ನಿಜವಾಗುವಂತೆ ಕಂಡುಬಂದಿದ್ದು, ಕೆ.ಎಲ್​ ಇರುವಿಕೆ ಆರ್​ಸಿಬಿಗೆ ಹೆಚ್ಚಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಒಂದು ವೇಳೆ ಆಕ್ಷನ್​ನಲ್ಲಿ ರಾಹುಲ್​ರನ್ನು ಆರ್​ಸಿಬಿ ಖರೀದಿ ಮಾಡಿದ್ದೇ ಆದರೆ, ಅವರು ತಂಡದ ನೂತನ ಕ್ಯಾಪ್ಟನ್ ಆಗುವುದರಲ್ಲಿ ಅನುಮಾನವೇ ಬೇಡ ಎಂದು ಹೇಳಲಾಗಿದೆ.

2025ರ ಮೆಗಾ ಹರಾಜಿಗೂ ಮುನ್ನ ಯಾರನ್ನೆಲ್ಲ RCB ಉಳಿಸಿಕೊಳ್ಳಲಿದೆ?

ಮೊದಲಿಗೆ ಆರ್‌ಸಿಬಿ ತನ್ನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ವಿಲ್ ಜಾಕ್ಸ್ ಇದ್ದಾರೆ. ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು RTM ಮೂಲಕ ತೆಗೆದುಕೊಳ್ಳಲಿದೆ. ಯಶ್ ದಯಾಳ್ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಆರ್​ಸಿಬಿ ಮುಂದಾಗಿದೆ ಎನ್ನಲಾಗಿದೆ. ಕಳೆದ ಐಪಿಎಲ್ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡದ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಆರ್​ಸಿಬಿ ತಂಡದಿಂದ ಹೊರಗಿಟ್ಟಿದೆ. ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಸಹ ಕೈಬಿಡಲಾಗಿದೆ. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡದಿರುವುದು ಮತ್ತು 40 ವರ್ಷ ವಯಸ್ಸನ್ನು ತಲುಪಿರುವುದು ಫಾಫ್ ಅವರನ್ನು ಪಟ್ಟಿಯಿಂದ ಕೈಬಿಡಲು ಕಾರಣವಾಗಿದೆ. ಸದ್ಯ ಡುಪ್ಲೆಸಿಸ್​ ಸ್ಥಾನಕ್ಕೆ ಯುವ ಆಟಗಾರನನ್ನು ಬದಲಿಸಲು ಆರ್​ಸಿಬಿ ಚಿತ್ತ ಮೂಡಿದೆ,(ಏಜೆನ್ಸೀಸ್).