ಬೆಂಗಳೂರು: ಏಕದಿನ ವಿಶ್ವಕಪ್ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಏಕೈಕ ಕನ್ನಡಿಗರಾಗಿದ್ದಾರೆ. ಏಷ್ಯಾಕಪ್ ತಂಡದಲ್ಲಿರುವ ಮತ್ತೋರ್ವ ಕನ್ನಡಿಗ ಪ್ರಸಿದ್ಧ ಕೃಷ್ಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರೊಬ್ಬರೇ ವಿಶ್ವಕಪ್ನಲ್ಲಿ ರಾಜ್ಯದ ಭರವಸೆಯಾಗಿದ್ದಾರೆ. ಆದರೆ ಇದಕ್ಕಾಗಿ ರಾಜ್ಯದ ಕ್ರಿಕೆಟ್ ಪ್ರೇಮಿಗಳು ನಿರಾಸೆ ಅನುಭವಿಸಬೇಕಾಗಿಲ್ಲ. ವಿಶ್ವಕಪ್ ತಂಡದಲ್ಲಿರುವ ಇನ್ನೂ 4 ಆಟಗಾರರು ಬೇರೆ ಬೇರೆ ರೂಪದಲ್ಲಿ ಕರ್ನಾಟಕದ ನಂಟು ಹೊಂದಿದ್ದಾರೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಕನ್ನಡಿಗರು ಎಂಬುದು ಬೇರೆ ಮಾತು.
ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ರಾಜ್ಯದ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ಈ ಮೂಲಕ ಕಳೆದ 16 ವರ್ಷಗಳಿಂದ ರಾಜ್ಯದ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆಲ್ಲುತ್ತ ಬಂದಿದ್ದಾರೆ. ಜತೆಗೆ ಅವರ ಪತ್ನಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮ ಬೆಂಗಳೂರಿನಲ್ಲೇ ಬೆಳೆದವರು. ಮೂಲತಃ ಉತ್ತರಾಖಂಡದವರಾದರೂ, ಅನುಷ್ಕಾ ಶರ್ಮ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಮತ್ತು ಭಾರತೀಯ ಸೇನೆಯಲ್ಲಿದ್ದ ಅವರ ತಂದೆಯೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇನ್ನು ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ತಾಯಿ ರೋಹಿಣಿ ಮಂಗಳೂರು ಮೂಲದವರು. ಹೀಗಾಗಿ ಶ್ರೇಯಸ್ ಅಯ್ಯರ್ ನೀರ್ದೋಸೆ ಸಹಿತ ಕರ್ನಾಟಕದ ಹಲವು ತಿಂಡಿಗಳನ್ನೇ ಇಷ್ಟಪಡುತ್ತಾರೆ. ಕರೊನಾ ಲಾಕ್ಡೌನ್ ಸಮಯದಲ್ಲಿ ಶ್ರೇಯಸ್, ವಿರಾಟ್ ಕೊಹ್ಲಿ ಮನೆಗೆ ನೀರ್ದೋಸೆ ತೆಗೆದುಕೊಂಡು ಹೋಗಿ ಕೊಟ್ಟು ಸುದ್ದಿಯಾಗಿದ್ದರು.
ವಿಶ್ವಕಪ್ ತಂಡದಲ್ಲಿರುವ ಮತ್ತೋರ್ವ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಕೂಡ ಮಂಗಳೂರು ಮೂಲದವರು. 2016ರ ಜುಲೈನಲ್ಲಿ ಅವರಿಬ್ಬರು ಮಂಗಳೂರು ಶೈಲಿಯಲ್ಲೇ ವಿವಾಹವಾಗಿದ್ದರು. ದೇವಿಶಾ ತಂದೆ ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ಸೂರ್ಯ-ದೇವಿಶಾ ಇಬ್ಬರೂ ಕಾಲೇಜು ದಿನಗಳಿಂದಲೂ ಪರಿಚಿತರಾಗಿದ್ದರು.
ಟೀಮ್ ಇಂಡಿಯಾದ ವೇಗಿ ಮೊಹಮದ್ ಸಿರಾಜ್ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಅವರು ರಾಜ್ಯದ ಕ್ರಿಕೆಟ್ ಪ್ರೇಮಿಗಳ ಬೆಂಬಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ.