ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭ ಆಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, 18ನೇ ಆವೃತ್ತಿಯ ಕುರಿತಾದ ಸುದ್ದಿಗಳು ಸಖತ್ ಸೌಂಡ್ ಮಾಡುತ್ತಿವೆ. ಐಪಿಎಲ್ಗೆ ಸಂಬಂಧಿಸಿದಂತೆ ಕನ್ನಡಿಗೆ ಕೆ.ಎಲ್. ರಾಹುಲ್ ಕುರಿತಾದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಇದು ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ 2025ರಲ್ಲಿ ನಡೆಯುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ, ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಕಾಣಿಸಿಕೊಳ್ಳಲಿದ್ದಾರೆ ಎಂದಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ರಾಹುಲ್ ಲಖನೌ ತೊರೆದು ಆರ್ಸಿಬಿ ಸೇರಲಿದ್ದಾರೆ ಎಂದು ಹೇಳಲಾಗಿದ್ದು, ರಾಹುಲ್ ತಮ್ಮ ಹೆಸರನ್ನು ಆಕ್ಷನ್ಗೆ ನೀಡಿದ್ದಾರೆ ಎಂದು ವರದಿ ಮಾಡಿದೆ.
ರಾಹುಲ್ ಅವರ ಈ ನಿರ್ಧಾರಕ್ಕೆ ಮುಖ್ಯ ಕಾರಣ ಲಖನೌ ಸೂಪರ್ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಎಂದು ಹೇಳಲಾಗಿದೆ. ಏಕೆಂದರೆ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಹೀನಾಯವಾಗಿ ಸೋಲುಂಡಿತ್ತು. ಪಂದ್ಯದ ಬಳಿಕ ರಾಹುಲ್ ಅವರನ್ನು ತಂಡದ ಮಾಲೀಕ ಸಂಜೀವ್ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸಖತ್ ವೈರಲ್ ಆಗಿತ್ತು. ಇದೀಗ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಹುಲ್ ಲಖನೌ ತೊರೆದು ಆರ್ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಕೆ.ಎಲ್. ರಾಹುಲ್ ಅವರನ್ನು ಖರೀದಿಸಲು ಆರ್ಸಿಬಿ ಉತ್ಸುಕತೆ ತೋರುತ್ತಿದ್ದು, ರಾಹುಲ್ ಆರ್ಸಿಬಿ ಪಾಲಾಗುವುದು ಖಚಿತ ಎನ್ನಲಾಗುತ್ತಿದೆ. ಏಕೆಂದರೆ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿರುವ ಕಾರಣ ಅವರ ಸ್ಥಾನ ತುಂಬಬಲ್ಲ ಸೂಕ್ತ ಆಟಗಾರನನ್ನು ಆರ್ಸಿಬಿ ಫ್ರಾಂಚೈಸಿ ಹುಡುಕುತ್ತಿದೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿಯು ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಗಿ ರಾಹುಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಇದಲ್ಲದೆ ಭವಿಷ್ಯದ ದೃಷ್ಟಿಯಿಂದ ಆರ್ಸಿಬಿ ತಂಡ ನೂತನ ನಾಯಕನನ್ನು ನೇಮಿಸಬೇಕಿದ್ದು, ರಾಹುಲ್ ಆಯ್ಕೆಯಿಂದ ಆರ್ಸಿಬಿ ಈ ಎರಡು ಸ್ಥಾನಗಳನ್ನು ತುಂಬಲು ಲೆಕ್ಕಾಚಾರ ಹಾಕಿಕೊಂಡಿದೆ. ನಾಯಕನಾಗಿ ಎರಡು ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ದಿರುವ ರಾಹುಲ್ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಆಯ್ಕೆಯಿಂದ ಆರ್ಸಿಬಿ ವಿಕೆಟ್ ಕೀಪರ್ ಹಾಗೂ ನಾಯಕನ ಸ್ಥಾನವನ್ನು ತುಂಬಿಕೊಳ್ಳಬಹುದು. ಅದರಂತೆ ಐಪಿಎಲ್ 2025ರಲ್ಲಿ ಕ್ಯಾಪ್ಟನ್ ಪಟ್ಟದೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ. ಅಂತಿಮವಾಗಿ ಆರ್ಸಿಬಿ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.