ಕ್ರೀಡೆ

ಸುನೀಲ್ ಶೆಟ್ಟಿ ಪುತ್ರಿ ಪೋಸ್ಟ್‌ಗೆ ಮತ್ತೆ ಕಮೆಂಟ್ ಹಾಕಿ ಸುದ್ದಿಯಾದ ಕ್ರಿಕೆಟಿಗ ಕೆಎಲ್ ರಾಹುಲ್!

ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಹಾಗೂ ನಟಿ ಅಥಿಯಾ ಶೆಟ್ಟಿ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತ ಸಾಗಿರುವ ಲಕ್ಷಣ ಕಾಣಿಸಿದೆ. ಅಥಿಯಾ ಶೆಟ್ಟಿ ಅವರ ಈಜುಡುಪು ಪೋಸ್ಟ್‌ಗೆ ಕಮೆಂಟ್ ಹಾಕಿ ಸುದ್ದಿಯಾಗಿದ್ದ ಕೆಎಲ್ ರಾಹುಲ್, ಇದೀಗ ಅವರ ಮತ್ತೊಂದು ಪೋಸ್ಟ್‌ಗೂ ಕಮೆಂಟ್ ಹಾಕಿದ್ದಾರೆ.

ಅಥಿಯಾ ಶೆಟ್ಟಿ ಅವರು ಅಮ್ಮ ಮಾನಾ ಶೆಟ್ಟಿ ಅವರ ಜನ್ಮದಿನದಂದು ಅವರ ಜತೆಗಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿ, ‘ಯಾವ ಪದಗಳು ಕೂಡ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನನ್ನ ಪೂರ್ಣ ಹೃದಯದಿಂದ ಜನ್ಮದಿನದ ಶುಭಾಶಯಗಳು. ಮಾಮಾ, ನಿಮ್ಮನ್ನು ನಾನು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದರು. ಅವರ ಈ ಪೋಸ್ಟ್‌ಗೆ ಹಲವಾರು ಸೆಲೆಬ್ರಿಟಿಗಳು ಕಮೆಂಟ್ ಹಾಕಿದ್ದು, ಈ ಪೈಕಿ ಕೆಎಲ್ ರಾಹುಲ್ ಅವರ ಕಮೆಂಟ್ ಕೂಡ ಗಮನಸೆಳೆದಿದೆ.

ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲಿರುವ ಕನ್ನಡಿಗ ಕೆಎಲ್ ರಾಹುಲ್, ಹೃದಯದ ಇಮೋಜಿಯೊಂದಿಗೆ ಅಥಿಯಾ ಶೆಟ್ಟಿ ಪೊಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ನಡುವಿನ ಡೇಟಿಂಗ್ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಇದಕ್ಕೆ ಪುಷ್ಠಿಯನ್ನೂ ನೀಡುತ್ತ ಬಂದಿದ್ದಾರೆ.