ಕ್ರೀಡೆ

ಐಪಿಎಲ್​ ಆರಂಭಕ್ಕೂ ಮುನ್ನವೇ ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡ ಕನ್ನಡಿಗ ಕೆ.ಎಲ್​. ರಾಹುಲ್​! KL Rahul

KL Rahul : ಮಾರ್ಚ್​ 9ರಂದು ಚಾಂಪಿಯನ್ಸ್​ ಟ್ರೋಫಿ ಮುಗಿದ್ದಿದ್ದು, ಟೀಮ್​ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಟ್ರೋಫಿ ಎತ್ತಿಹಿಡಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಎಲ್ಲರ ಕಣ್ಣು ಇಂಡಿಯನ್​ ಪ್ರೀಮಿಯರ್​ ಲೀಗ್​-2025 ಮೇಲಿದೆ. ಮಾರ್ಚ್​ 22ರಿಂದ 18ನೇ ಆವೃತ್ತಿ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಕನ್ನಡಿಗ ಕೆಎಲ್ ರಾಹುಲ್ ಸಂಚಲನಾತ್ಮಕ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲು ರಾಹುಲ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ನಾಯಕತ್ವ ವಹಿಸಿಕೊಳ್ಳುವಂತೆ ರಾಹುಲ್ ಅವರನ್ನು ಡಿಸಿ ಮ್ಯಾನೇಜ್ಮೆಂಟ್ ಸಂಪರ್ಕಿಸಿದಾಗ, ಅವರು ನಯವಾಗಿ ನಿರಾಕರಿಸಿದ್ದಾರೆಂದು ತಿಳಿದುಬಂದಿದೆ. ಕೇವಲ ಆಟಗಾರನಾಗಿ ಮಾತ್ರ ಮುಂದುವರಿಯುವುದಾಗಿ ರಾಹುಲ್ ಹೇಳಿದ್ದಾರಂತೆ. ಹೀಗಾಗಿ ಡಿಸಿ ಮ್ಯಾನೇಜ್​ಮೆಂಟ್​ ಇದೀಗ ಅಕ್ಷರ್ ಪಟೇಲ್ ಅವರ ಹೆಸರನ್ನು ನಾಯಕನಾಗಿ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.

ನಾಳೆ ಅಥವಾ ನಾಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಅಕ್ಸರ್ ಹೆಸರನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೋಫಿ ಯಶಸ್ಸಿನ ನಂತರ ಡಿಸಿ ಮ್ಯಾನೇಜ್‌ಮೆಂಟ್ ಅಕ್ಷರ್​ ಬಗ್ಗೆ ಹೆಚ್ಚು ಒಲವು ಹೊಂದಿದೆಯಂತೆ. ಐಪಿಎಲ್​ ಮೆಗಾ ಹರಾಜಿಗೂ ಮೊದಲು ಡಿಸಿ ಮ್ಯಾನೇಜ್‌ಮೆಂಟ್ ಅಕ್ಷರ್​ ಅವರನ್ನು 16.5 ಕೋಟಿ ರೂ.ಗೆ ಉಳಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.

ಐಪಿಎಲ್​ ಮೆಗಾ ಹರಾಜಿನಲ್ಲಿ ಕೆ.ಎಲ್. ರಾಹುಲ್ ಅವರನ್ನು 14 ಕೋಟಿ ರೂಪಾಯಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿತು. ರಾಹುಲ್ ಐಪಿಎಲ್‌ನಲ್ಲಿ ಪಂಜಾಬ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆದರೆ, ನಾಯಕತ್ವದ ಬದಲು ಇದೀಗ ಆಟದ ಮೇಲೆ ಹೆಚ್ಚಿನ ಗಮನ ವಹಿಸಲು ರಾಹುಲ್​ ನಿರ್ಧರಿಸಿದ್ದಾರೆ. ಅಕ್ಷರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದರೆ, ಪೂರ್ಣಾವಧಿ ನಾಯಕನಾಗಿ ಇದು ಅವರ ಮೊದಲ ಹುದ್ದೆಯಾಗಲಿದೆ. ಅಕ್ಷರ್ ದೇಶೀಯ ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್‌ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ರಾಹುಲ್ ಹಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆಯೇ?

ಐಪಿಎಲ್ 2025 ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ದೆಹಲಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24 ರಂದು ಆಡಲಿದೆ. ವೈಜಾಗ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​, ಲಖನೌ ತಂಡವನ್ನು ಎದುರಿಸಲಿದೆ. ಇದೇ ಸಂದರ್ಭದಲ್ಲಿ ಈ ಸೀಸನ್​ನ ಮೊದಲ ಅಥವಾ ಎರಡ್ಮೂರು ಪಂದ್ಯಗಳನ್ನು ಕೆಎಲ್ ರಾಹುಲ್ ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಪತ್ನಿ ಅತಿಯಾ ಶೆಟ್ಟಿ ಶೀಘ್ರದಲ್ಲೇ ಮಗುವನ್ನು ನಿರೀಕ್ಷೆಯಲ್ಲಿದ್ದಾರಂತೆ. ಹೀಗಾಗಿ ರಾಹುಲ್, ಬಿಡುವು ಕೋರಿ ಡೆಲ್ಲಿ ಫ್ರಾಂಚೈಸಿ ಆಡಳಿತ ಮಂಡಳಿಯಿಂದ ಅನುಮತಿ ಕೋರಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಮತ್ತು ಅತಿಯಾ 2023ರ ಜನವರಿಯಲ್ಲಿ ವಿವಾಹವಾದರು. ಕಳೆದ ವರ್ಷ ನವೆಂಬರ್‌ನಲ್ಲಿ ದಂಪತಿ ಮೊದಲ ಮಗು ನಿರೀಕ್ಷೆಯಲ್ಲಿರುವುದಾಗಿ ಘೋಷಣೆ ಮಾಡಿದರು.

2025ರ ಐಪಿಎಲ್​ಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ

ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ದರ್ಶನ್ ನಲ್ಕಂಡೆ, ಅಜಯ್ ಜಾಧವ್ ಮಂಡಲ್, ತ್ರಿಪುರನ್ ವಿಜಯ್, ಅಕ್ಷರ್ ಪಟೇಲ್, ಮನ್ವಂತ್ ಕುಮಾರ್, ಮಾಧವ್ ತಿವಾರಿ, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಡೊನೊವನ್ ಫೆರೇರಾ, ಕೆಎಲ್ ರಾಹುಲ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಟಿ ನಟರಾಜನ್ ಹಾಗೂ ಮುಖೇಶ್ ಕುಮಾರ್.

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕಳೆದ ಋತುವಿನಲ್ಲಿ ಅಕ್ಷರ್ ಪಟೇಲ್​, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದರು. ಅಕ್ಷರ್ 2019 ರಿಂದ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿದ್ದಾರೆ. ಅಕ್ಷರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 150 ಪಂದ್ಯಗಳನ್ನು ಆಡಿದ್ದು, 1653 ರನ್ ಗಳಿಸಿದ್ದಾರೆ ಮತ್ತು 123 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಕ್ಷರ್ 130.88 ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮತ್ತು 7.28 ಬೌಲಿಂಗ್ ಎಕಾನಮಿ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಅಕ್ಷರ್​ ಟೀಮ್ ಇಂಡಿಯಾದ ಉಪನಾಯಕರಾಗಿಯೂ ಸೇವೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಸೀಸನ್​ವರೆಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರನ್ನು ಹರಾಜಿಗೂ ಮುನ್ನ ಡೆಲ್ಲಿ ಕೈಬಿಟ್ಟಿತು. ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದ ಪಂತ್ ಅವರನ್ನು ಲಖನೌ ತಂಡ ದಾಖಲೆಯ ಬೆಲೆಗೆ ಖರೀದಿಸಿ ನಾಯಕನನ್ನಾಗಿ ಮಾಡಿದೆ. (ಏಜೆನ್ಸೀಸ್​)