ಮಹಾರಾಷ್ಟ್ರ: ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಗೆಳತಿ ಆಥಿಯಾ ಶೆಟ್ಟಿ ಅವರೊಂದಿಗೆ ಖಂಡಾಲಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲಾದಲ್ಲಿರುವ ಬಾಲಿವುಡ್ ನಟ, ಆಥಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ ಅವರ ಫಾರ್ಮ್ಸ್ ಹೌಸ್ನಲ್ಲಿ ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಿದೆ.ರಾಹುಲ್ ಮತ್ತು ಆಥಿಯಾ ಶೆಟ್ಟಿ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಕಳೆದ ವರ್ಷದಿಂದ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಹೊಸ ವರ್ಷದ ಸಂಭ್ರಮದಲ್ಲಿ ಕೆ.ಎಲ್. ರಾಹುಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಆಥಿಯಾ ಜತೆಗಿನ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ್ದರು.ರಾಹುಲ್-ಆಥಿಯಾ ಮದುವೆಗೆ ಕುಟುಂಬದ ಕೆಲ ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು. ಮದುವೆಯ ನಂತರದಲ್ಲಿ ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿನಿಮಾ, ಕ್ರಿಕೆಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ.ಮಗಳ ಮದುವೆ ಸಂಭ್ರಮದಲ್ಲಿ ಸುನೀಲ್ ಶೆಟ್ಟಿ ಪಂಚೆ ಉಟ್ಟು ಕ್ಯಾಮೆರಾ ಮುಂದೆ ಬಂದಿದ್ದು, ನಾನೀಗ ಅಧಿಕೃತವಾಗಿ ಮಾವ ಆಗಿದ್ದೇನೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಸದ್ಯ ಆಥಿಯಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಇದೀಗ ಶುಭಾಶಯ ತಿಳಿಸುತ್ತಿದ್ದಾರೆ.