ಕ್ರೀಡೆ

RCB ನಾಯಕನಾಗಿ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು: ರಜತ್​ ಪಾಟಿದಾರ್​ ಹೇಳಿಕೆ ವೈರಲ್​! Rajat Patidar

Rajat Patidar : ಐಪಿಎಲ್‌ನ 18ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ಉತ್ತಮ ಆರಂಭವನ್ನು ಕಂಡುಕೊಂಡಿದೆ. ಕೋಲ್ಕತ್ತದ ಈಡನ್ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ನಿನ್ನೆ (ಮಾರ್ಚ್​ 22) ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು. ಆರ್‌ಸಿಬಿ ನಾಯಕನಾಗಿ ರಜತ್ ಪಾಟಿದಾರ್ ತಮ್ಮ ಮೊದಲ ಪಂದ್ಯದಲ್ಲೇ ಅಮೋಘ ಜಯ ದಾಖಲಿಸಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಪಾಟಿದಾರ್​, ಸ್ಪಿನ್ನರ್‌ಗಳಾದ ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮ ಅವರನ್ನು ಶ್ಲಾಘಿಸಿದರು. ಆರ್‌ಸಿಬಿ ಗೆಲುವು ಸಾಧಿಸಿದ್ದು ಅವರ ಬೌಲಿಂಗ್‌ನಿಂದ ಎಂದರು. ಮಧ್ಯಮ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡಿದ್ದಕ್ಕೆ ಅವರಿಬ್ಬರನ್ನೂ ಪಾಟಿದಾರ್​ ಶ್ಲಾಘಿಸಿದರು.

ಪಂದ್ಯ ಗೆದ್ದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಈ ಗೆಲುವಿನ ಓಟ ಹೀಗೆಯೇ ಮುಂದುವರಿದರೆ ಇನ್ನೂ ಉತ್ತಮ ಎಂದರು. ನಾಯಕತ್ವದ ಬಗ್ಗೆ ಮಾತನಾಡುತ್ತಾ, ನಾಯಕತ್ವ ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ ಎಂದ ಪಾಟಿದಾರ್​, ಸುಯಾಶ್ ಶರ್ಮಾ ರನ್​ಗಳನ್ನು ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಚಿಂತಿಸುವುದಿಲ್ಲ. ಅವರೊಬ್ಬ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್. ಹೀಗಾಗಿ ನಾನು ಅವರ ಪರವಾಗಿ ನಿಂತಿದ್ದೇನೆ. 13ನೇ ಓವರ್ ನಂತರ, ಸುಯಾಶ್ ಮತ್ತು ಕೃನಾಲ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು ಎಂದು ಪಾಟಿದಾರ್​ ಹೊಗಳಿದರು.

ಕೊಹ್ಲಿಯಂತಹ ಆಟಗಾರನನ್ನು ಹೊಂದಿರುವುದು ನಮ್ಮ ಅದೃಷ್ಟ. ಹುಡುಗರಾಗಿ ನಾವು ಈ ಹಿರಿಯ ಆಟಗಾರನಿಂದ ಬಹಳಷ್ಟು ಕಲಿಯುತ್ತಿದ್ದೇವೆ ಎಂದು ಪಾಟಿದಾರ್​ ಹೇಳಿದರು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು. ಕೆಕೆಆರ್ ಪರ ನಾಯಕ ರಹಾನೆ (56 ರನ್​, 31 ಎಸೆತ, 6 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಸುನೀಲ್ ನಾರಾಯಣ್​ (44 ರನ್​, 26 ಎಸೆತ, 5 ಬೌಂಡರಿ, 3 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್ ಪಡೆದರು. ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಪಡೆದರು.

ನಂತರ ಕೆಕೆಆರ್​ ನೀಡಿದ ಗುರಿ ಬೆನ್ನತ್ತಿದ ವಿರಾಟ್ ಕೊಹ್ಲಿ (ಔಟಾಗದೆ 59 ರನ್​ 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್) ಮತ್ತು ಫಿಲ್​ ಸಾಲ್ಟ್ (56 ರನ್​ 9 ಬೌಂಡರಿ, 31 ಎಸೆತಗಳಲ್ಲಿ 2 ಸಿಕ್ಸರ್) ಆಕರ್ಷಕ ಅರ್ಧಶತಕದ ನೆರವಿನಿಂದ ಸುಲಭವಾಗಿ ಗುರಿ ಬೆನ್ನತ್ತಿದರು. ನಾಯಕ ರಜತ್ ಪಾಟಿದಾರ್ (34 ರನ್​ 16 ಎಸೆತಗಳು) ಕೂಡ ಮಿಂಚಿದರು. ಅಂತಿಮವಾಗಿ ಆರ್‌ಸಿಬಿ 16.2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು.

ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೃನಾಲ್ ಪಾಂಡ್ಯ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. (ಏಜೆನ್ಸೀಸ್​)