ನವದೆಹಲಿ: ವಿಶ್ವದ ಶ್ರೀಮಂತ ಟಿ20 ಟೂರ್ನಿ ಎಂಬ ಹೆಗ್ಗಳಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಗೆ ಮಾರ್ಚ್ 22ರ ಶನಿವಾರದಂದು ಕೋಲ್ಕತದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಮತ್ತು ಆರ್ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಟೂರ್ನಿಯ ವೇಳಾಪಟ್ಟಿ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಹರಡಿರುವ ನಡುವೆ, ವೇಳಾಪಟ್ಟಿಯ ಕೆಲ ಪ್ರಮುಖಾಂಶಗಳು ಬಹಿರಂಗಗೊಂಡಿವೆ.
ಹಾಲಿ ರನ್ನರ್ಅಪ್ ಸನ್ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯ 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 23ರಂದು ಹೈದರಾಬಾದ್ನಲ್ಲಿ ನಡೆಯಲಿದೆ. ಟೂರ್ನಿಯ ಮೊದಲ ಭಾನುವಾರದ 2 ಪಂದ್ಯಗಳಲ್ಲಿ ಇದು ಮೊದಲ ಕಾದಾಟವಾಗಿರಲಿದೆ ಎನ್ನಲಾಗಿದೆ.
12 ತಾಣಗಳಲ್ಲಿ ಪಂದ್ಯಗಳು?
ಟೂರ್ನಿಯಲ್ಲಿ ಆಡುವ 10 ತಂಡಗಳ ತವರು ಮೈದಾನಗಳ ಜತೆಗೆ ಈ ಬಾರಿ ಗುವಾಹಟಿ ಮತ್ತು ಧರ್ಮಶಾಲಾದಲ್ಲೂ ಪಂದ್ಯಗಳು ನಡೆಯಲಿವೆ. ಇದರಿಂದ ಈ ಬಾರಿ ಒಟ್ಟು 12 ತಾಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಈಶಾನ್ಯ ಭಾರತದ ಗುವಾಹಟಿ ನಗರ ರಾಜಸ್ಥಾನ ತಂಡದ ಬದಲಿ ತವರು ತಾಣವಾದರೆ, ಹಿಮಾಚಲ ಪ್ರದೇಶದ ಧರ್ಮಶಾಲಾ ನಗರ ಪಂಜಾಬ್ ಕಿಂಗ್ಸ್ಗೆ ಬದಲಿ ತಾಣವಾಗಿರಲಿದೆ. ಗುವಾಹಟಿಯಲ್ಲಿ ಮಾ.26ಕ್ಕೆ ಕೆಕೆಆರ್ ಮತ್ತು ಮಾ. 30ಕ್ಕೆ ಸಿಎಸ್ಕೆ ವಿರುದ್ಧ ರಾಜಸ್ಥಾನ ತನ್ನ 2 ತವರಿನ ಪಂದ್ಯಗಳನ್ನು ಆಡಲಿದೆ. ಧರ್ಮಶಾಲಾದಲ್ಲಿ ಪಂಜಾಬ್ ತಂಡ ತನ್ನ ತವರಿನ 3 ಪಂದ್ಯಗಳನ್ನು ಅಡಲಿದೆ ಎನ್ನಲಾಗಿದೆ.
ಮೇ 25ಕ್ಕೆ ಕೋಲ್ಕತದಲ್ಲಿ ಫೈನಲ್?
ಹಿಂದಿನ ಆವೃತ್ತಿಯ ಫೈನಲ್ ತಂಡಗಳ ತವರಿನಲ್ಲಿ ಐಪಿಎಲ್ನ ಪ್ಲೇಆಫ್-ಫೈನಲ್ ಪಂದ್ಯಗಳು ನಡೆಯುವುದು ವಾಡಿಕೆಯಾಗಿದೆ. ಅದರಂತೆ ಈ ಬಾರಿಯೂ ರನ್ನರ್ಅಪ್ ಸನ್ರೈಸರ್ಸ್ನ ತವರಾದ ಹೈದರಾಬಾದ್ನಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ನಡೆದರೆ, ಚಾಂಪಿಯನ್ ಕೆಕೆಆರ್ ತವರಾದ ಕೋಲ್ಕತದಲ್ಲಿ 2ನೇ ಕ್ವಾಲಿಫೈಯರ್ ಮತ್ತು ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ನಾಯಕರ ಸಮರ?
ಆರ್ಸಿಬಿ ತಂಡ ಗುರುವಾರವಷ್ಟೇ ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟೀದಾರ್ರನ್ನು ಹೊಸ ನಾಯಕರನ್ನಾಗಿ ನೇಮಿಸಿದೆ. ಕೆಕೆಆರ್ ತಂಡ ಈ ಬಾರಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ರನ್ನು ನಾಯಕರನ್ನಾಗಿ ನೇಮಿಸುವ ನಿರೀಕ್ಷೆ ಇದೆ. ಕಳೆದ ಮೆಗಾ ಹರಾಜಿನಲ್ಲಿ ವೆಂಕಟೇಶ್ 23.75 ಕೋಟಿ ರೂ.ಗೆ ಕೆಕೆಆರ್ಗೆ ಮರಳಿದ್ದರು. ಕೆಕೆಆರ್ ನಾಯಕತ್ವದ ರೇಸ್ನಲ್ಲಿದ್ದ ಮತ್ತೋರ್ವ ಬ್ಯಾಟರ್ ಅಜಿಂಕ್ಯ ರಹಾನೆ, ತನ್ನೊಂದಿಗೆ ಇದುವರೆಗೆ ಯಾರೂ ನಾಯಕನ ಜವಾಬ್ದಾರಿಯ ಬಗ್ಗೆ ಮಾತನಾಡಿಲ್ಲ ಎಂದಿದ್ದರು. ಇದರಿಂದ ತಂಡದ ದುಬಾರಿ ಆಟಗಾರ ವೆಂಕಟೇಶ್ ಅವರೇ ನಾಯಕರಾಗುವ ನಿರೀಕ್ಷೆ ಹೆಚ್ಚಾಗಿದೆ. ಇದರಿಂದ ಈ ಬಾರಿ ಐಪಿಎಲ್ನಲ್ಲಿ ಮಧ್ಯಪ್ರದೇಶದ ಕ್ರಿಕೆಟಿಗರ ನಾಯಕತ್ವದ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಡಲಿದೆ. ವೆಂಕಟೇಶ್ ತಮಿಳುನಾಡು ಮೂಲದವರಾದರೂ ದೇಶೀಯ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ಪರ ಆಡುತ್ತಾರೆ.