ಕ್ರೀಡೆ

ಕೆಕೆಆರ್​ ವಿಮಾನ ಪ್ರಯಾಣಕ್ಕೆ ಪ್ರತಿಕೂಲ ಹವಾಮಾನ ಅಡ್ಡಿ!; ಲಖನೌನಿಂದ ಕೋಲ್ಕತ ತಲುಪಲು 20 ಗಂಟೆ ಪ್ರಯಾಣ!

ಕೋಲ್ಕತ: ಲಖನೌದಲ್ಲಿ ಆತಿಥೇಯ ಎಲ್​ಎಸ್​ಜಿ ವಿರುದ್ಧ ಭಾನುವಾರ 98 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದ ಕೋಲ್ಕತ ನೈಟ್​ರೈಡರ್ಸ್​ ತಂಡ ತನ್ನ ತವರೂರು ಕೋಲ್ಕತಗೆ ತಲುಪುವಷ್ಟರಲ್ಲಿ ಹೈರಾಣಾಗಿ ಬಿಟ್ಟಿದೆ! ಇದಕ್ಕೆ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪ್ರಯಾಣದಲ್ಲಿ ಉಂಟಾದ ವಿಳಂಬ. ಕೆಕೆಆರ್​ ತಂಡದ ಆಟಗಾರರು ಲಖನೌನಿಂದ ಕೋಲ್ಕತಗೆ ತಲುಪಲು 90 ನಿಮಿಷಗಳಿಗೆ ಬದಲಾಗಿ ಬರೋಬ್ಬರಿ 20 ಗಂಟೆಗಳು ಬೇಕಾದವು.

ಶ್ರೇಯಸ್​ ಅಯ್ಯರ್​ ಬಳಗ ಸೋಮವಾರ ಸಂಜೆ 5.45ಕ್ಕೆ ಲಖನೌದಲ್ಲಿ ಕೋಲ್ಕತಗೆ ಪ್ರಯಾಣಿಸಲು ತನ್ನ ಬಾಡಿಗೆ ವಿಮಾನವನ್ನು ಏರಿತು. ರಾತ್ರಿ 7.25ಕ್ಕೆ ತಂಡ ಕೋಲ್ಕತ ತಲುಪಬೇಕಾಗಿತ್ತು. ಆದರೆ ಕೋಲ್ಕತದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಅಲ್ಲಿ ವಿಮಾನ ನೆಲಕ್ಕಿಳಿಸುವುದು ಅಸಾಧ್ಯವೆನಿಸಿದ ಕಾರಣ, ರಾತ್ರಿ 8.45ಕ್ಕೆ ವಿಮಾನವನ್ನು ಗುವಾಹಟಿ ಕಡೆಗೆ ತಿರುಗಿಸಲಾಯಿತು. ಬಳಿಕ ರಾತ್ರಿ 9.43ಕ್ಕೆ ಅಲ್ಲಿಂದ ಪ್ರಯಾಣಿಸಿದ ವಿಮಾನ ಮತ್ತೆ ಕೋಲ್ಕತಗೆ ಹೋಗಲಾಗಲಿಲ್ಲ. ಈ ಬಾರಿ ವಿಮಾನವನ್ನು ವಾರಣಾಸಿ ಕಡೆ ತಿರುಗಿಸಲಾಯಿತು. ರಾತ್ರಿ 1.15ಕ್ಕೆ ತಂಡ ವಾರಣಾಸಿ ತಲುಪಿತು. ಅಲ್ಲಿಂದ ಮತ್ತೆ ಕೋಲ್ಕತಗೆ ವಿಮಾನ ತೆರಳುವುದು ಇನ್ನಷ್ಟು ಕಠಿಣವೆನಿಸಿತು. ಇದರಿಂದ ತಂಡಕ್ಕೆ ರಾತ್ರಿ ವಾರಣಾಸಿಯಲ್ಲೇ ಉಳಿದುಕೊಳ್ಳಲು ಹೋಟೆಲ್​ ಕೊಠಡಿಯ ವ್ಯವಸ್ಥೆ ಮಾಡಲಾಯಿತು. ರಾತ್ರಿ 3 ಗಂಟೆಯ ವೇಳೆಗೆ ತಂಡ ಹೋಟೆಲ್​ ಪ್ರವೇಶಿಸಿತು.

ಮರುದಿನ ಅಂದರೆ ಮಂಗಳವಾರ ಬೆಳಗ್ಗೆ ಕೆಕೆಆರ್​ ಆಟಗಾರರು ವಾರಣಾಸಿಯಲ್ಲಿ ಸುತ್ತಾಡಿದರು ಮತ್ತು ಕೆಲ ಆಟಗಾರರು ಕಾಶಿ ವಿಶ್ವನಾಥ ದೇವಾಲಯಕ್ಕೂ ಭೇಟಿ ನೀಡಿದರು. ಮಧ್ಯಾಹ್ನ 1.30ಕ್ಕೆ ವಾರಣಾಸಿಯಲ್ಲಿ ಮತ್ತೆ ವಿಮಾನ ಏರಿದ ಕೆಕೆಆರ್​ ತಂಡ ಕೊನೆಗೂ ಮಧ್ಯಾಹ್ನ 3.15ರ ವೇಳೆಗೆ ಕೋಲ್ಕತಗೆ ತಲುಪಿತು.

"ಲಖನೌನಿಂದ ಕೋಲ್ಕತ ತಲುಪಲು 20 ಗಂಟೆ ಬೇಕಾಯಿತು. ಈ ಪೈಕಿ 8 ಗಂಟೆಗಳ ಕಾಲ ವಿಮಾನದಲ್ಲೇ ಹಾರಾಡುತ್ತಿದ್ದೆವು. ವಿಮಾನವನ್ನು 2 ಬಾರಿ ತಿರುಗಿಸಲಾಯಿತು. ಗುವಾಹಟಿ ನಂತರ ವಾರಣಾಸಿಗೂ ಹೋದೆವು. ಇದರಿಂದಾಗಿ ಅನಿರೀಕ್ಷಿತವಾಗಿ ಕಾಶಿ ವಿಶ್ವನಾಥ ದೇವರ ದರ್ಶನ ದೊರೆಯಿತು' ಎಂದು ಕೆಕೆಆರ್​ ಸ್ಪಿನ್ನರ್​ ವರುಣ್​ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.