ಮುಂಬೈ: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಮೆಹಾ ಹಾರಜಿನ ವಿಚಾರವಾಗಿ ಸಖತ್ ಸೌಂಡ್ ಮಾಡುತ್ತಿದೆ. ಈ ವರ್ಷಾಂತ್ಯ ಅಥವಾ 2025ರ ಆರಂಭದಲ್ಲಿ ನಡೆಯಲಿರುವ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಹಾಲಿ ಚಾಂಪಿಯನ್ಸ್ ಕೆಕೆಆರ್ ತಂಡವು ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಾಗಲಾರದು.
ಈ ಬಾರಿಯ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಬೇಕು ಅನ್ನೋ ಯೋಚನೆಯಲ್ಲಿ ಕೆಕೆಆರ್ ಫ್ರಾಂಚೈಸಿ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕೂ ಮುನ್ನವೇ ತಮಗೆ ಬೇಕಾದ ಆಟಗಾರರನ್ನು ರೀಟೇನ್ ಮಾಡಿಕೊಳ್ಳಬೇಕಿದೆ. ಅದರಂತೆ ಈಗಾಗಲೇ ರಿಟೇನ್ ಆಟಗಾರರ ಪಟ್ಟಿಯನ್ನು ರೆಡಿ ಮಾಡಿಕೊಂಡಿರುವ ಕೆಕೆಆರ್ ಫ್ರಾಂಚೈಸಿಯೂ ಈ ಬಾರಿಯೂ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗಿದೆ.
17ನೇ ಆವೃತ್ತಿಯಲ್ಲಿ ನಾಯಕತ್ವದ ವಿಚಾರದಿಂದಲೇ ಹೆಚ್ಚು ಸದ್ದು ಮಾಡಿದ್ದ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಕೆಲ್ಕತ್ತಾ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಸಂಬಂಧಿಸಿದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಆದರೆ, ಹೊಸದಾಗಿ ಕೇಳಿ ಬಂದಿರುವ ಸುದ್ದಿ ಪ್ರಕಾರ ಶಾರುಖ್ ಖಾನ್ ಮಾಲೀಕತ್ವದ ಕಲ್ಕತ್ತಾ ನೈಟ್ರೈಡರ್ಸ್ ಫ್ರಾಂಚೈಸಿಯೂ ರೋಹಿತ್ ಬದಲು ಮುಂಬೈ ಇಂಡಿಯನ್ಸ್ ಆಟಗಾರನ ಮೇಲೆ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೆಕೆಆರ್ ಫ್ರಾಂಚೈಸಿಯೂ ಸೂರ್ಯಕುಮಾರ್ ಯಾದವ್ ಮೇಲೆ ಕಣ್ಣಿಟ್ಟಿದ್ದು, ರೋಹಿತ್ ಬದಲಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿದೆ. ಇದಲ್ಲದೆ ನಾಯಕನ ಸ್ಥಾನವನ್ನು ನೀಡುವುದಾಗಿ ಸೂರ್ಯಗೆ ಫ್ರಾಂಚೈಸಿ ಆಫರ್ ಈ ಸಂಬಂಧ ಒಂದು ಸುತ್ತಿನ ಮಾತುಕತೆ ನಡೆಸಿದೆ. ಪತ್ರಕರ್ತ ರೋಹಿತ್ ಜುಗ್ಲಾನ್ ಹೇಳುವ ಪ್ರಕಾರ ಸೂರ್ಯಕುಮಾರ್ ತಮ್ಮ ಮಾಜಿ ತಂಡವನ್ನು ಸೇರಲು ಬಯಸಿದ್ದು, ಟ್ರೇಡಿಂಗ್ನಲ್ಲಿ ಶ್ರೇಯಸ್ ಮುಂಬೈಗೆ ಸ್ಕೈ ಕೆಕೆಆರ್ ಸೇರುತ್ತಾರೆ ಎಂದು ಹೇಳಿದ್ದಾರೆ.
ಪ್ರಸ್ತುತ ಈ ಇಬ್ಬರು ಆಟಗಾರರು ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದು, ಟ್ರೇಡಿಂಗ್ ವಿಚಾರವಾಗಿ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಒಟ್ಟಿನಲ್ಲಿ 18ನೇ ಆವೃತ್ತಿಯ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿರುವ ನಡುವೆಯೇ ಈ ರೀತಿ ಸದ್ದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.