ಮುಂಬೈ: ವೆಂಕಟೇಶ್ ಅಯ್ಯರ್ (70 ರನ್, 52 ಎಸೆತ, 6 ಬೌಂಡರಿ, 3 ಸಿಕ್ಸರ್), ಕನ್ನಡಿಗ ಮನೀಷ್ ಪಾಂಡೆ (42 ರನ್, 31 ಎಸೆತ, 2 ಬೌಂಡರಿ, 2 ಸಿಕ್ಸರ್) ಪ್ರತಿಹೋರಾಟ ಮತ್ತು ಬೌಲರ್ಗಳು ನೀಡಿದ ದಿಟ್ಟ ತಿರುಗೇಟಿನಿಂದ ಕೋಲ್ಕತ ನೈಟ್ರೈಡರ್ಸ್ ತಂಡ ಐಪಿಎಲ್&17ರಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ 24 ರನ್ಗಳಿಂದ ಜಯಿಸಿದೆ. ಇದರೊಂದಿಗೆ ಕೆಕೆಆರ್ ವಾಂಖೆಡೆ ಸ್ಟೇಡಿಯಂನಲ್ಲಿ 12 ವರ್ಷಗಳ ಬಳಿಕ ಅಂದರೆ, 2012ರ ಬಳಿಕ ಮೊದಲ ಬಾರಿ ಮುಂಬೈ ವಿರುದ್ಧ ಗೆದ್ದ ಸಾಧನೆ ಮಾಡಿತು. ಜತೆಗೆ ಪ್ಲೇಆ್ ಪ್ರವೇಶಕ್ಕೂ ಸನಿಹ ತಲುಪಿದರೆ, ಮುಂಬೈ ಬಹುತೇಕ ಹೊರಬಿದ್ದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕೆಕೆಆರ್, ವೇಗಿಗಳಾದ ನುವಾನ್ ತುಷಾರ (42ಕ್ಕೆ 3) ಮತ್ತು ಜಸ್ಪ್ರೀತ್ ಬುಮ್ರಾ (18ಕ್ಕೆ 3) ದಾಳಿಗೆ ತತ್ತರಿಸಿ 19.5 ಓವರ್ಗಳಲ್ಲಿ 169 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಮಿಚೆಲ್ ಸ್ಟಾರ್ಕ್ (33ಕ್ಕೆ 4), ಆಂಡ್ರೆ ರಸೆಲ್ (30ಕ್ಕೆ 2), ವರುಣ್ ಚಕ್ರವರ್ತಿ (22ಕ್ಕೆ 2), ಸುನೀಲ್ ನಾರಾಯಣ್ (22ಕ್ಕೆ 2) ದಾಳಿಗೆ ನಲುಗಿದ ಮುಂಬೈ 18.5 ಓವರ್ಗಳಲ್ಲಿ 145 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು. ಎಂದಿನ ಸಿಕ್ಸರ್-ರನ್ ಮಳೆಗೆ ಬದಲಾಗಿ ಈ ಪಂದ್ಯ ಒಟ್ಟು 20 ವಿಕೆಟ್ ಪತನಕ್ಕೆ ಸಾಕ್ಷಿಯಾಯಿತು.
ಮುಂಬೈಗೆ ಕಡಿವಾಣ: ಮುಂಬೈ ಕೂಡ ಆಘಾತಕಾರಿ ಆರಂಭ ಎದುರಿಸಿತು. ಇಶಾನ್ ಕಿಶನ್ (13), ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ರೋಹಿತ್ ಶರ್ಮ (11) ಮತ್ತು ನಮನ್ ಧೀರ್ (11) ಪವರ್ಪ್ಲೇನಲ್ಲೇ ಔಟಾದರು. ನಂತರದಲ್ಲಿ ತಿಲಕ್ ವರ್ಮ (4), ನೇಹಲ್ ವಧೇರ (6), ನಾಯಕ ಹಾರ್ದಿಕ್ ಪಾಂಡ್ಯ (1) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮತ್ತೊಂದೆಡೆ ಏಕಾಂಗಿ ಹೋರಾಟ ತೋರಿದ ಸೂರ್ಯಕುಮಾರ್ ಯಾದವ್ (56 ರನ್, 35 ಎಸೆತ, 6 ಬೌಂಡರಿ, 2 ಸಿಕ್ಸರ್) ಕೊನೇ 28 ಎಸೆತಗಳಲ್ಲಿ 50 ರನ್ ಬೇಕಿದ್ದಾಗ ಕೈಕೊಟ್ಟರು.