ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಜನವರಿ 13ರಿಂದ ನವದೆಹಲಿಯಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಖೋಖೋ ವಿಶ್ವಕಪ್ಗೆ ಆತಿಥೇಯ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಪ್ರಕಟಗೊಂಡಿದ್ದು, ಮಹಾರಾಷ್ಟ್ರದ ಪ್ರತಿಕ್ ವೈಕರ್ ಮತ್ತು ಪ್ರಿಯಾಂಕಾ ಇಂಗಲೆ ಕ್ರಮವಾಗಿ ನಾಯಕ ಮತ್ತು ನಾಯಕಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕದ ಗೌತಮ್ ಎಂ.ಕೆ. ಪುರುಷರ ತಂಡದಲ್ಲಿ ಮತ್ತು ಚೈತ್ರಾ ಬಿ. ಮಹಿಳಾ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ಬೆಂಗಳೂರಿನ 24 ವರ್ಷದ ಗೌತಮ್ ಆಲ್ರೌಂಡರ್ ಆಗಿದ್ದು, 2009ರಿಂದಲೂ ಖೋಖೋ ಆಡುತ್ತ ಬಂದಿದ್ದಾರೆ. ಆಟೋ ಚಾಲಕನ ಪುತ್ರನಾಗಿರುವ ಗೌತಮ್, ಅಲ್ಟಿಮೇಟ್ ಖೋಖೋ ಲೀಗ್ನಲ್ಲಿ ಒಡಿಶಾ ತಂಡದ ಪರ ಗಮನಸೆಳೆದಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರದ ರೈತನ ಪುತ್ರಿಯಾಗಿರುವ ಚೈತ್ರಾ, ಈಗಾಗಲೆ 30ಕ್ಕೂ ಹೆಚ್ಚು ಬಾರಿ ಕರ್ನಾಟಕ ಖೋಖೋ ತಂಡದಲ್ಲಿ ಭಾಗಿಯಾಗಿದ್ದಾರೆ. ಚೈತ್ರಾ ಎರಡನೇ ವರ್ಷದ ಬಿಪಿಇಎಡ್ ವಿದ್ಯಾರ್ಥಿನಿಯಾಗಿದ್ದಾರೆ. ಇವರಿಬ್ಬರೂ ಟೂರ್ನಿಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿದ್ದ ಮತ್ತೋರ್ವ ಕನ್ನಡತಿ ಮೋನಿಕಾ ಕೊನೇಕ್ಷಣದಲ್ಲಿ ಸ್ಥಾನ ವಂಚಿತರಾಗಿದ್ದಾರೆ.
ಜನವರಿ 19ರವರೆಗೆ 7 ದಿನಗಳ ಕಾಲ ನಡೆಯಲಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ 20 ಮತ್ತು ಮಹಿಳಾ ವಿಭಾಗದಲ್ಲಿ 19 ತಂಡಗಳು ಸ್ಪರ್ಧಿಸಲಿವೆ. ಪಾಕಿಸ್ತಾನ ವೀಸಾ ಸಮಸ್ಯೆ ಮತ್ತು ಕೆನಡಾ ತಂಡ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯಿಂದ ಕೊನೇಕ್ಷಣದಲ್ಲಿ ಹಿಂದೆ ಸರಿದಿದೆ.
ಭಾರತ ಪುರುಷರ ಖೋಖೋ ತಂಡ: ಪ್ರತಿಕ್ ವೈಕರ್ (ನಾಯಕ), ಪ್ರಬಾನಿ ಸಬರ್, ಮೆಹುಲ್, ಸಚಿನ್ ಭರ್ಗೊ, ಸುಯಶ್ ಗರ್ಗಟೆ, ರಾಮ್ಜಿ ಕಶ್ಯಪ್, ಶಿವ ಪೊಥಿರ್ ರೆಡ್ಡಿ, ಆದಿತ್ಯ ಗನ್ಪುಲೆ, ಗೌತಮ್ ಎಂ.ಕೆ, ನಿಖಿಲ್ ಬಿ, ಆಕಾಶ್ಕುಮಾರ್, ಸುಬ್ರಮಣಿ ವಿ, ಸುಮನ್ ಬರ್ಮನ್, ಅಂಕಿತ್ ಪೋತೆ, ಎಸ್. ರಾಕೆಸನ್ ಸಿಂಗ್.
ಮೀಸಲು ಆಟಗಾರರು: ಅಕ್ಷಯ್ ಬಂಗರೆ, ರಾಜ್ಯವರ್ಧನ್ ಶಂಕರ್ ಪಾಟೀಲ್, ವಿಶ್ವನಾಥ್ ಜಾನಕಿರಾಮ್.
ಮಹಿಳಾ ತಂಡ: ಪ್ರಿಯಾಂಕಾ ಇಂಗಲೆ (ನಾಯಕಿ), ಅಶ್ವಿನಿ ಶಿಂಧೆ, ರೇಶ್ಮಾ ರಾಥೋಡ್, ಬಿಲಾರ್ ದೇವಜಿಭಾಯ್, ನಿರ್ಮಲಾ ಭಾಟಿ, ನೀತಾ ದೇವಿ, ಚೈತ್ರಾ ಬಿ., ಸುಭಾಶ್ರೀ ಸಿಂಗ್, ಮಗೈ ಮಜ್ಹಿ, ಅಂಶು ಕುಮಾರಿ, ವೈಷ್ಣವಿ ಭಜರಂಗ್, ನಸ್ರೀನ್ ಶೇಕ್, ಮೀನು, ಮೋನಿಕಾ, ನಾಜಿಯಾ ಬಿಬಿ.
ಮೀಸಲು ಆಟಗಾರ್ತಿಯರು: ಸಂಪದ ಮೋರೆ, ರಿತಿಕಾ ಸಿಲೋರಿಯಾ, ಪ್ರಿಯಾಂಕಾ ಭೋಪಿ.