ಕ್ರೀಡೆ

VIDEO | ಐಪಿಎಲ್‌ನಲ್ಲಿ ಕನ್ನಡಿಗ ಪ್ರಸಿದ್ಧಕೃಷ್ಣ-ಕೈರಾನ್ ಪೊಲ್ಲಾರ್ಡ್ ಜಟಾಪಟಿ

ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ನಡುವಿನ ಗುರುವಾರದ ಐಪಿಎಲ್ ಪಂದ್ಯ ಎಂದಿನ ರೋಚಕತೆಯಿಂದ ಕೂಡಿರಲಿಲ್ಲ. ಕೆಕೆಆರ್ ತಂಡ 7 ವಿಕೆಟ್‌ಗಳಿಂದ ಏಕಪಕ್ಷೀಯ ಗೆಲುವನ್ನೇ ದಾಖಲಿಸಿತು. ಆದರೆ ಈ ನಡುವೆ ಮುಂಬೈ ಇಂಡಿಯನ್ಸ್ ಇನಿಂಗ್ಸ್ ವೇಳೆ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಮತ್ತು ಕನ್ನಡಿಗ ಪ್ರಸಿದ್ಧಕೃಷ್ಣ ನಡುವಿನ ಜಟಾಪಟಿ ಪಂದ್ಯದ ಬಿಸಿ ಏರಿಸಿತ್ತು.

ಪಂದ್ಯದ 15ನೇ ಓವರ್ ಅಂತ್ಯದಲ್ಲಿ ಈ ಚಕಮಕಿ ನಡೆದಿತ್ತು. ಪ್ರಸಿದ್ಧಕೃಷ್ಣ ಎಸೆದ ಓವರ್‌ನ ಕೊನೇ ಎಸೆತದಲ್ಲಿ ಪೊಲ್ಲಾರ್ಡ್ ಬಾರಿಸಿದ ಚೆಂಡನ್ನು ತಡೆದರು. ಕೂಡಲೆ ವಿಕೆಟ್‌ನತ್ತ ಚೆಂಡೆಸೆಯಲು ಯತ್ನಿಸುವ ಮೂಲಕ ಕ್ರೀಸ್‌ನಿಂದ ಮುಂದೆ ಬಂದಿದ್ದ ಪೊಲ್ಲಾರ್ಡ್‌ಗೆ ಎಚ್ಚರಿಕೆ ನೀಡಲು ಯತ್ನಿಸಿದರು. ಆದರೆ ಚೆಂಡು ಆಗ ಅವರ ಕೈಯಲ್ಲಿ ನಿಲ್ಲಲಿಲ್ಲ. ಇದರಿಂದ ಪೊಲ್ಲಾರ್ಡ್, ಯುವ ವೇಗಿಯ ವಿರುದ್ಧ ಸಿಟ್ಟಾದರಲ್ಲದೆ, ಪ್ರಸಿದ್ಧಕೃಷ್ಣರನ್ನು ಗುರಾಯಿಸಿದರು. ಪ್ರಸಿದ್ಧಕೃಷ್ಣ ಕೂಡ ಅದನ್ನು ಲೆಕ್ಕಿಸದೆ ಪೊಲ್ಲಾರ್ಡ್‌ರನ್ನು ದಿಟ್ಟಿಸಿ ನೋಡಿದರು.

ಆದರೆ ಪ್ರಸಿದ್ಧಕೃಷ್ಣರ ಈ ದಿಟ್ಟ ನೋಟ ಅವರ ಮುಂದಿನ ಓವರ್‌ನಲ್ಲಿ ದುಬಾರಿಯಾಗಿ ಪರಿಣಮಿಸಿತು. ಸಿಟ್ಟಿನಲ್ಲಿದ್ದ ಪೊಲ್ಲಾರ್ಡ್, ಪ್ರಸಿದ್ಧಕೃಷ್ಣ ಮುಂದಿನ ಓವರ್‌ನಲ್ಲಿ ಅವರನ್ನೇ ಟಾರ್ಗೆಟ್ ಮಾಡಿ ಬೌಂಡರಿ, ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ಪ್ರಸಿದ್ಧಕೃಷ್ಣ 18 ರನ್ ಬಿಟ್ಟುಕೊಟ್ಟರು. ಪೊಲ್ಲಾರ್ಡ್ ಆಕ್ರಮಣದೆದುರು ಒತ್ತಡಕ್ಕೆ ಒಳಗಾದ ಪ್ರಸಿದ್ಧಕೃಷ್ಣ ವೈಡ್-ನೋಬಾಲ್ ಎಸೆತಗಳನ್ನೂ ಎಸೆದರು. ಮುಂಬೈ ತಂಡಗಳನ್ನು 2 ವಿಕೆಟ್‌ಗಳನ್ನು ಕಬಳಿಸಿದ್ದರೂ, ಪ್ರಸಿದ್ಧಕೃಷ್ಣ (43ಕ್ಕೆ 2) ಕೊನೆಯಲ್ಲಿ ದುಬಾರಿ ಎನಿಸಿದರು.