ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ರತ್ನಕ್ಕೆ ಈಗಾಗಲೆ ಭಾಜನರಾಗಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡುವ ಮೂಲಕ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಲ್‌ಎಫ್) ವಿಚಿತ್ರ ನಡೆ ಇಟ್ಟಿದೆ.
ವಿಶ್ವ ಚಾಂಪಿಯನ್‌ಷಿಪ್ ಸ್ವರ್ಣ ಪದಕ ಸಾಧನೆಗಾಗಿ ಮೀರಾಬಾಯಿ 2018ರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗೆ ಜಂಟಿಯಾಗಿ ಖೇಲ್‌ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಅದೇ ವರ್ಷ ಅವರಿಗೆ ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮಶ್ರೀ ಕೂಡ ಒಲಿದಿತ್ತು. ಆದರೆ ಖೇಲ್‌ರತ್ನ ಪ್ರಶಸ್ತಿಯ ಬಳಿಕ ಅದಕ್ಕಿಂತ ಕಡಿಮೆ ದರ್ಜೆಯ ಅರ್ಜುನ ಪ್ರಶಸ್ತಿ ಸ್ವೀಕರಿಸಲು ತಮಗೆ ಯಾವುದೇ ಮುಜುಗರ ಇಲ್ಲ ಎಂದು ಸ್ವತಃ ಮೀರಾಬಾಯಿ ಹೇಳಿದ್ದಾರೆ. ಅರ್ಜುನ ಪ್ರಶಸ್ತಿಯನ್ನೂ ಪಡೆದುಕೊಳ್ಳುವ ಆಸೆ ತಮಗಿದೆ ಎಂದಿದ್ದಾರೆ.
ಇದನ್ನೂ ಓದಿ: ತವರಿನ ಜನರ ನೆರವಿಗೆ ನಿಂತ ಕೆಕೆಆರ್ ಟೀಮ್
2018ರಲ್ಲಿ ಮೀರಾಬಾಯಿ ಹೆಸರು ಖೇಲ್‌ರತ್ನದ ಜತೆಗೆ ಅರ್ಜುನ ಪ್ರಶಸ್ತಿಗೂ ಶಿಫಾರಸುಗೊಂಡಿತ್ತು. ಅಂತಿಮವಾಗಿ ಅವರಿಗೆ ಖೇಲ್‌ರತ್ನ ಪ್ರಶಸ್ತಿಯ ಅದೃಷ್ಟ ಒಲಿದಿತ್ತು. ಖೇಲ್‌ರತ್ನ ಪ್ರಶಸ್ತಿ ಪಡೆದ ಕ್ರೀಡಾಪಟುವನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ ಎಂದೂ ಐಡಬ್ಲ್ಯುಎಲ್‌ಎಫ್ ಕಾರ್ಯದರ್ಶಿ ಸಹದೇವ್ ಯಾದವ್ ತಿಳಿಸಿದ್ದಾರೆ. ಅರ್ಜುನ ಪ್ರಶಸ್ತಿಗೆ 25 ವರ್ಷದ ಮೀರಾಬಾಯಿ ಜತೆಗೆ ರಗಲ ವೆಂಕಟ್ ರಾಹುಲ್ ಮತ್ತು ಪೂನಂ ಯಾದವ್ ಹೆಸರನ್ನೂ ಐಡಬ್ಲ್ಯುಎಲ್‌ಎಫ್ ಶಿಫಾರಸು ಮಾಡಿದೆ. ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಸತೀಶ್ ಶಿವಲಿಂಗಂ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಕೊನೆಯ (2015) ವೇಟ್‌ಲಿಫ್ಟರ್ ಆಗಿದ್ದಾರೆ.