ಪುಣೆ: ವಿಕೆಟ್ ಕೀಪರ್&ಬ್ಯಾಟರ್ ಮೊಹಮದ್ ಅಜರುದ್ದೀನ್ (67*) ಮತ್ತು ಸಲ್ಮಾನ್ ನಿಜರ್ (44) ದಿಟ್ಟ ಜತೆಯಾಟದ ಬಲದಿಂದ ಕೇರಳ ತಂಡ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ನಲ್ಲಿ ಜಮ್ಮು-ಕಾಶ್ಮೀರ ಎದುರು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ, ಮೊದಲ ಇನಿಂಗ್ಸ್ನಲ್ಲಿ ಕಂಡ ಕೇವಲ 1 ರನ್ ಮುನ್ನಡೆಯ ಆಧಾರದಲ್ಲಿ ಕೇರಳ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಎಂಸಿಎ ಸ್ಟೇಡಿಯಂನಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ 399 ರನ್ ಸವಾಲಿಗೆ ಪ್ರತಿಯಾಗಿ 2 ವಿಕೆಟ್ಗೆ 100 ರನ್ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಕೇರಳ, ಜಮ್ಮು-ಕಾಶ್ಮೀರದ ದಾಳಿಗೆ ಕುಸಿದು 180 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆಗ ಜತೆಗೂಡಿದ ಅಜರುದ್ದೀನ್-ಸಲ್ಮಾನ್ ಜೋಡಿ ಮುರಿಯದ 7ನೇ ವಿಕೆಟ್ಗೆ 257 ಎಸೆತಗಳಲ್ಲಿ 115 ರನ್ ಜತೆಯಾಟವಾಡುವ ಮೂಲಕ ಕೇರಳವನ್ನು ಸೋಲಿನಿಂದ ಪಾರು ಮಾಡಿತು. ಅಂತಿಮವಾಗಿ ಸಚಿನ್ ಬೇಬಿ ಸಾರಥ್ಯದ ಕೇರಳ 126 ಓವರ್ಗಳಲ್ಲಿ 6 ವಿಕೆಟ್ಗೆ 295 ರನ್ ಗಳಿಸುವ ಮೂಲಕ ಡ್ರಾ ಸಾಧಿಸಿ ಜಮ್ಮು&ಕಾಶ್ಮೀರದ ಚೊಚ್ಚಲ ಸೆಮೀಸ್ ಕನಸು ಭಗ್ನಗೊಳಿಸಿತು.
ಕೇರಳ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮುನ್ನ 2018-19ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿತ್ತು ಮತ್ತು ಆಗ ಸೆಮೀಸ್ನಲ್ಲಿ ವಿದರ್ಭ ಎದುರು ಸೋತಿತ್ತು.
ಜಮ್ಮು-ಕಾಶ್ಮೀರ: 280 ಮತ್ತು 9 ವಿಕೆಟ್ಗೆ 399 ಡಿಕ್ಲೇರ್; ಕೇರಳ: 281 ಮತ್ತು 6 ವಿಕೆಟ್ಗೆ 295 (ಕುನ್ನುಮಲ್ 36, ಅಕ್ಷಯ್ 48, ಸಚಿನ್ ಬೇಬಿ 48, ಜಲಜ್ 18, ಸಲ್ಮಾನ್ 44*, ಅಜರುದ್ದೀನ್ 67*, ಯುಧ್ವೀರ್ 61ಕ್ಕೆ 2, ಸಾಹಿಲ್ 50ಕ್ಕೆ 2, ಅಬಿದ್ 56ಕ್ಕೆ 2).
*ಸೆಮಿಫೈನಲ್ಸ್
ವಿದರ್ಭ-ಮುಂಬೈ
ಎಲ್ಲಿ: ನಾಗ್ಪುರ
ಗುಜರಾತ್-ಕೇರಳ
ಎಲ್ಲಿ: ಅಹಮದಾಬಾದ್
ಯಾವಾಗ: ಫೆ. 17-21