ತಿರುವನಂತಪುರ: ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತಪ್ಪಿಗಾಗಿ ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ 3 ವರ್ಷಗಳ ಮಟ್ಟಿಗೆ ರಾಜ್ಯದ ಕ್ರಿಕೆಟ್ ಚಟುವಟಿಕೆಯಿಂದ ನಿಷೇಧಕ್ಕೆ ಗುರಿಯಾಗಿದ್ದಾರೆ.
ಕೇರಳ ಕ್ರಿಕೆಟ್ ಲೀಗ್ನಲ್ಲಿ (ಕೆಸಿಎಲ್) ಕೊಲ್ಲಂ ಐರೀಸ್ ತಂಡದ ಸಹ-ಮಾಲೀಕರೂ ಆಗಿರುವ ಶ್ರೀಶಾಂತ್ ಮಲಯಾಳಂ ಟಿವಿ ಚಾನಲ್ ಒಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವೇಳೆ ಕೆಸಿಎ ವಿರುದ್ಧ ಹೇಳಿಕೆ ನೀಡಿದ್ದರು. ತರಬೇತಿ ಶಿಬಿರಕ್ಕೆ ಹಾಜರಾಗದ ಕಾರಣ ಸಂಜು ಸ್ಯಾಮ್ಸನ್ರನ್ನು ವಿಜಯ್ ಹಜಾರೆ ಟ್ರೋಫಿಯಿಂದ ಕೆಸಿಎ ಕೈಬಿಟ್ಟಿತ್ತು. ಇದರಿಂದಾಗಿ ಸ್ಯಾಮ್ಸನ್ಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಅವಕಾಶ ತಪ್ಪಿತ್ತು ಎಂದು ಶ್ರೀಶಾಂತ್ ಕೆಸಿಎ ವಿರುದ್ಧ ಗರಂ ಆಗಿದ್ದರು.
ಈ ಸಂಬಂಧ ಕೆಸಿಎ ನೀಡಿದ್ದ ಶೋಕಾಸ್ ನೋಟಿಸ್ಗೆ ಶ್ರೀಶಾಂತ್ ನೀಡಿದ್ದ ಉತ್ತರ ಸಮರ್ಪಕವಾಗಿರಲಿಲ್ಲ. ಹೀಗಾಗಿ ಏಪ್ರಿಲ್ 30ರಂದು ನಡೆದ ಕೆಸಿಎ ಸಭೆಯಲ್ಲಿ ಶ್ರೀಶಾಂತ್ ಮೇಲೆ 3 ವರ್ಷ ನಿಷೇಧ ಹೇರಲು ನಿರ್ಧರಿಸಲಾಗಿದೆ. ಆದರೆ ಅವರು ಕೆಸಿಎಲ್ ತಂಡದ ಸಹ&ಮಾಲೀಕರಾಗಿ ಮುಂದುವರಿಯಬಹುದಾಗಿದೆ. ಕೆಸಿಎ ವಿರುದ್ಧ ಇದೇ ರೀತಿಯ ಹೇಳಿಕೆ ನೀಡಿದ್ದ ಸ್ಯಾಮ್ಸನ್ ತಂದೆ ವಿಶ್ವನಾಥ್ಗೂ ನೋಟಿಸ್ ಕಳುಹಿಸಲಾಗಿದೆ.