ಚೆನ್ನೈ: ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಆವೃತ್ತಿಗೆ ವಿದ್ಯುಕ್ತ ತೆರೆಬಿದ್ದಿದೆ. ಆರಂಭದಿಂದಲೂ ಪ್ರಭಾವಿಯಾಗಿದ್ದ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಫೈನಲ್‌ನಲ್ಲಿ ಗೆದ್ದು ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಶನಿವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೆಕೆಆರ್ ಸುಲಭವಾಗಿ ಸೋಲಿಸಿತು. ಇನ್ನು 57 ಎಸೆತಗಳು ಬಾಕಿ ಉಳಿದಿರುವಾಗಲೇ 8 ವಿಕೆಟ್‌ಗಳ ಜಯ ಸಾಧಿಸಿದ್ದು ಗಮನಾರ್ಹ. ಆದರೆ, ಲೀಗ್ ಹಂತದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಬಗ್ಗುಬಡಿದ ಸನ್ ರೈಸರ್ಸ್ ತಂಡವು ನಿರ್ಣಾಯಕ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿತು. ಎಸ್ಆರ್ಎಚ್ ಅಭಿಮಾನಿಗಳು ಸೇರಿದಂತೆ ಎಲ್ಲ ಕ್ರೀಡಾಭಿಮಾನಿಗಳು ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಸಮಯದಲ್ಲಿ ಎಸ್ಆರ್ಎಚ್ ತಂಡದ ಒಡತಿ ಕಾವ್ಯಾ ಮಾರನ್ ಮತ್ತೊಮ್ಮೆ ಕಣ್ಣೀರಿಟ್ಟಿದ್ದಾರೆ. ಈ ಬಾರಿ ಆಕೆಯ ಕಣ್ಣೀರು ಹಲವರ ಮನಕಲಕಿದೆ. ಈ ಸೀಸನ್ನಲ್ಲಿ ಸನ್‌ರೈಸರ್ಸ್‌ನ ಅದ್ಭುತ ಪ್ರದರ್ಶನದಿಂದ ಬಂದ ಸಂತೋಷವು ಫೈನಲ್ ಪಂದ್ಯದ ಸೋಲಿನ ಮೂಲಕ ಆವಿಯಾಗಿದೆ.
ಸನ್‌ರೈಸರ್ಸ್ ಸೋಲಿನ ನಂತರ ಕಾವ್ಯಾ ಮಾರನ್‌ಗೆ ಕಣ್ಣೀರು ತಡೆಯಲಾಗಲಿಲ್ಲ. ಕ್ಯಾಮರಾ ಕಣ್ಣಿಗೆ ಕಾಣಬಾರದು ಅಂತಾ ಹಿಂದೆ ತಿರುಗಿ ಕಣ್ಣೀರು ಹಾಕಿದರು. ಈ ವೇಳೆ ತನ್ನ ಸುತ್ತಲೂ ಇದ್ದ ಎಸ್ಆರ್ಎಚ್ ಮ್ಯಾನೇಜ್ಮೆಂಟ್ ತಂಡ ತಡೆಯಲು ಯತ್ನಿಸಿದರೂ ಕಾವ್ಯಾ ಮಾರನ್ ಕಣ್ಣೀರು ಮಾತ್ರ ನಿಲ್ಲಲಿಲ್ಲ. ಗೆದ್ದರೂ ಸೋತರೂ ಚಪ್ಪಾಳೆ ತಟ್ಟುವ ಮೂಲಕ ತಂಡಕ್ಕೆ ಆಸರೆಯಾಗುವ ಕಾವ್ಯಾ, ಫೈನಲ್‌ನಲ್ಲಿ ಆರೆಂಜ್ ಆರ್ಮಿ ಸೋತಿದ್ದರಿಂದ ಕಣ್ಣೀರು ತಡೆಯಲಾಗಲಿಲ್ಲ. ಆದರೆ, ಸ್ವಲ್ಪ ಹೊತ್ತಿನ ನಂತರ ಕಣ್ಣೀರು ಸುರಿಸುತ್ತಲೇ ಚಪ್ಪಾಳೆ ತಟ್ಟಿ ಉಭಯ ತಂಡಗಳನ್ನು ಅಭಿನಂದಿಸಿದರು. ಆದರೆ, ತಮ್ಮ ಕಣ್ಣೀರನ್ನು ಕ್ಯಾಮೆರಾ ಮುಂದೆ ತೋರಲಿಲ್ಲ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಹಿಂದೆಯೂ ಕಾವ್ಯಾ ಮಾರನ್ ಅವರು ಎಸ್ಆರ್ಎಚ್ ತಂಡ ಪಂದ್ಯಗಳಲ್ಲಿ ಸೋತಾಗ ನಿರಾಶೆಗೊಂಡಿರುವುದನ್ನು ನೋಡಲಾಗಿದೆ. ಆದರೆ, ಅವರು ಎಂದಿಗೂ ಹೆಚ್ಚು ಕಣ್ಣೀರು ಹಾಕಿರಲಿಲ್ಲ. ಆದರೆ, ಈ ಬಾರಿ ಫೈನಲ್‌ನಲ್ಲಿ ಸೋತಿದ್ದು ತುಂಬಾ ನೋವಾಗಿದೆ. ಹೀಗಾಗಿ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಕಣ್ಣೀರಾಕಿಬಿಟ್ಟರು. ಕೆಕೆಆರ್ ವಿನ್ ಆದ್ರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು ಮಾತ್ರ ಕಾವ್ಯಾ ಮಾರನ್. ಸಾಕಷ್ಟು ವಿಡಿಯೋಗಳು ಮತ್ತು ಮೀಮ್ಗಳು ಹರಿದಾಡುತ್ತಿದ್ದು, ಸದ್ಯ ಕ್ರೀಡಾ ವಿಭಾಗದಲ್ಲಿ ಕಾವ್ಯಾ ಮಾರನ್ ಟ್ರೆಂಡಿಂಗ್ನಲ್ಲಿದ್ದಾರೆ.
ಪಂದ್ಯ ವಿಚಾರಕ್ಕೆ ಬರುವುದಾದರೆ, ನಿನ್ನೆ (ಮೇ 26) ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಕೇವಲ 18.3 ಓವರ್ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು. ಯಾವುದೇ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಐಪಿಎಲ್ ಹರಾಜಿನಲ್ಲಿ 24.75 ಕೋಟಿ ರೂ.ಗೆ ಕೋಲ್ಕತ್ತ ಪಾಲಾದ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ದಾಳಿ ನಡೆಸಿದರು. ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (2) ಅವರನ್ನು ಔಟ್ ಮಾಡಿದರು. ನಂತರದ ಓವರ್‌ನಲ್ಲಿ ವೈಭವ್ ಅರೋರಾ, ಟ್ರಾವಿಸ್ ಹೆಡ್ ಡಕ್ ಔಟ್ ಮಾಡಿದರು. ಇದಾದ ಬಳಿಕ ಸ್ಟಾರ್ಕ್ ತ್ರಿಪಾಠಿ ಅವರನ್ನು ಔಟ್ ಮಾಡಿದರು. ಆ ನಂತರ ಎಸ್ಆರ್ಎಚ್ ತಂಡ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ (24) ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯಿತು. ಮಾರ್ಕ್ರಾಮ್ 20ರನ್ ಗಳಿಸಿದರು. ಕೋಲ್ಕತ್ತ ಬೌಲರ್‌ಗಳು ಎಲ್ಲಾ ವಿಕೆಟ್‌ಗಳನ್ನು ಪಡೆದರು. ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ನರೈನ್ ಮತ್ತು ಅರೋರಾ ಒಂದು ವಿಕೆಟ್ ಪಡೆದರು.
ಹೈದರಾಬಾದ್ ನೀಡಿದ 114ರನ್ಗಳ ಗುರಿ ಬೆನ್ನತ್ತಿದ ಕೆಕೆಆರ್, 10.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಕಲೆಹಾಕಿ ವಿಜಯೋತ್ಸವ ಆಚರಿಸಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (52) ಅತ್ಯುತ್ತಮ ಆಟವಾಡಿದರು. (ಏಜೆನ್ಸೀಸ್)