ನಾಗ್ಪುರ: ವೇಗಿ ವಿದ್ವತ್ ಕಾವೇರಪ್ಪ (99ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಅನುಭವಿ ಬ್ಯಾಟರ್ ಹಾಗೂ ಕನ್ನಡಿಗ ಕರುಣ್ ನಾಯರ್ (90 ರನ್, 178 ಎಸೆತ, 16 ಬೌಂಡರಿ, 1 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ವಿದರ್ಭ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ೈನಲ್ನಲ್ಲಿ ಕರ್ನಾಟಕ ಎದುರು ಬೃಹತ್ ಮೊತ್ತ ಕಲೆಹಾಕಿ ಮೇಲುಗೈ ಸಾಧಿಸಿದೆ. ಮಯಾಂಕ್ ಅಗರ್ವಾಲ್ ಬಳಗ ಇನಿಂಗ್ಸ್ ಮುನ್ನಡೆಗಾಗಿ ಹೋರಾಟ ನಡೆಸುತ್ತಿದೆ. ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡರೆ, ಮೊದಲ ಇನಿಂಗ್ಸ್ ಮುನ್ನಡೆಯೇ ನಿರ್ಣಾಯಕವೆನಿಸಲಿದೆ.
ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 3 ವಿಕೆಟ್ಗೆ 261 ರನ್ಗಳಿಂದ 2ನೇ ದಿನದಾಟ ಆರಂಭಿಸಿದ ವಿದರ್ಭ, 143.1 ಓವರ್ಗಳಲ್ಲಿ 460 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ನಾಯಕ ಮಯಾಂಕ್ ಅಗರ್ವಾಲ್ (0) ವಿಕೆಟ್ ಬೇಗನೆ ಕಳೆದುಕೊಂಡ ಕರ್ನಾಟಕ ದಿನದಂತ್ಯಕ್ಕೆ 24 ಓವರ್ಗಳಲ್ಲಿ 2 ವಿಕೆಟ್ಗೆ 98 ರನ್ಗಳಿಸಿದ್ದು, ಇನ್ನೂ 362 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಆರ್. ಸಮರ್ಥ್ (43) ಜತೆಯಾಗಿ ಉಪನಾಯಕ ನಿಕಿನ್ ಜೋಸ್ (20) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿದರ್ಭಕ್ಕೆ ಕರುಣ್ ಬಲ
ಕರ್ನಾಟಕದಿಂದ ವಲಸೆ ಹೋಗಿರುವ ಅನುಭವಿ ಬ್ಯಾಟರ್ ಕರುಣ್ ನಾಯರ್ ವಿದರ್ಭ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಬೆಳಗ್ಗೆ ಕ್ರಮವಾಗಿ 30, 2 ರನ್ಗಳಿಂದ ಆಟ ಮುಂದುವರಿಸಿದ ಕರುಣ್ ನಾಯರ್ ಹಾಗೂ ಅಕ್ಷಯ್ ವಾಡ್ಕರ್ (16) ಜೋಡಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಳಿಕ ಕರುಣ್ ನಾಯರ್ ಜತೆಯಾದ ಆದಿತ್ಯ ಸರವಟೆ (26) 6ನೇ ವಿಕೆಟ್ಗೆ 101 ಎಸೆತಗಳಲ್ಲಿ 55 ರನ್ ಪೇರಿಸಿದರು. ನಂತರ ಸರವಟೆ, ವಿದ್ವತ್ ಬೌಲಿಂಗ್ನಲ್ಲಿ ಕೀಪರ್ ಶರತ್ ಪಡೆದ ಅದ್ಭುತ ಕ್ಯಾಚ್ ಔಟಾದರು. ಬೌಂಡರಿ ಸಿಡಿಸಿದ ಮರು ಎಸೆತದಲ್ಲಿ ಕರುಣ್ ನಾಯರ್, ವಿದ್ವತ್ಗೆ ಬೌಲ್ಡ್ ಆದರು. ಕೆಳ ಕ್ರಮಾಂಕದಲ್ಲಿ ಯಶ್ ಠಾಕೂರ್ (31) ಹಾಗೂ ಉಮೇಶ್ ಯಾದವ್ (21) ತಂಡವನ್ನು 450ರ ಗಡಿ ದಾಟಿಸಿದರು.
ರಾಜ್ಯಕ್ಕೆ ಕೈಕೊಟ್ಟ ಮಯಾಂಕ್
ಮಹತ್ವದ ಪಂದ್ಯದಲ್ಲಿ ಚಹಾ ವಿರಾಮದ ಬಳಿಕ ಬ್ಯಾಟಿಂಗ್ ಇಳಿದ ನಾಯಕ ಮಯಾಂಕ್ ಅಗರ್ವಾಲ್ ನಿರಾಸೆ ಮೂಡಿಸಿದರು. ತಾನೆದುರಿಸಿದ ಎರಡನೇ ಎಸೆತದಲ್ಲೇ ಔಟಾದರು. ಬಳಿಕ ಮತ್ತೋರ್ವ ಆರಂಭಿಕ ಆರ್. ಸಮರ್ಥ್ ಜತೆಯಾದ ಅನೀಶ್ ಕೆವಿ (34) ತಂಡಕ್ಕೆ ಚೇತರಿಕೆ ಒದಗಿಸಿದರು. ಇವರಿಬ್ಬರು 2ನೇ ವಿಕೆಟ್ಗೆ 92 ಎಸೆತಗಳಲ್ಲಿ 59 ರನ್ಗಳಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಉತ್ತಮ ಲಯದಲ್ಲಿದ್ದ ಅನೀಶ್ 17ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಸಮರ್ಥ್ ತಾಳ್ಮೆಯ ಬ್ಯಾಟಿಂಗ್ ಮೂಲಕ ನಿಕಿನ್ ಜೋಸ್ ಜತೆಯಾಗಿ ಕ್ರೀಸ್ನಲ್ಲಿದ್ದಾರೆ. ದಿನದಂತ್ಯಕ್ಕೆ ಇವರಿಬ್ಬರು ಮುರಿಯದ 3ನೇ ವಿಕೆಟ್ಗೆ 35 ರನ್ ಕಲೆಹಾಕಿದರು.
ವಿದರ್ಭ: 143.1 ಓವರ್ಗಳಲ್ಲಿ 460 (ಕರುಣ್ 90, ಅಕ್ಷಯ್ 16, ಸರವಟೆ 26, ಯಶ್ 31, ಉಮೇಶ್ ಯಾದವ್ 21, ವಿದ್ವತ್ 99ಕ್ಕೆ4, ಹಾರ್ದಿಕ್ 89ಕ್ಕೆ 2). ಕರ್ನಾಟಕ: 24 ಓವರ್ಗಳಲ್ಲಿ 2 ವಿಕೆಟ್ಗೆ 98 (ಮಯಾಂಕ್ 0, ಸಮರ್ಥ್ 43*, ಅನೀಶ್ 34, ನಿಕಿನ್ ಜೋಸ್ 20, ಯಶ್ ಠಾಕೂರ್ 22ಕ್ಕೆ1).