ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಶ್ರೀನಿಧಿ ಬಾಲಾಜಿ ಕೀನ್ಯಾದ ನೈರೋಬಿಯಲ್ಲಿ ನಡೆದ ಐಟಿಎಫ್ ಜೂನಿಯರ್ (18 ವಯೋಮಿತಿ) ಟೆನಿಸ್ ಟೂರ್ನಿಯಲ್ಲಿ ಅವಳಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಬೆಂಗಳೂರಿನ 18 ವರ್ಷದ ಶ್ರೀನಿಧಿ ಬಾಲಾಜಿ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ 3ನೇ ಶ್ರೇಯಾಂಕಿತೆ ದಿವ್ಯಾ ರಮೇಶ್ ಎದುರು ಹಿನ್ನಡೆಯಿಂದ ಮೇಲೆದ್ದು ಗೆಲುವು ದಾಖಲಿಸಿದರು. 4ನೇ ಶ್ರೇಯಾಂಕಿತೆ ಶ್ರೀನಿಧಿ 3-6, 6-1, 6-4ರಿಂದ ದಿವ್ಯಾಗೆ ಸೋಲುಣಿಸಿದರು. ಈ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು. ಇದಕ್ಕೆ ಮುನ್ನ ಸೆಮೀಸ್ನಲ್ಲಿ ಶ್ರೀನಿಧಿ ಅಗ್ರ ಶ್ರೇಯಾಂಕಿತೆ ಹರಿತಾ ಶ್ರೀ ವೆಂಕಟೇಶ್ ಎದುರು 6-4, 4-6, 6-3ರಿಂದ ಗೆಲುವು ಸಾಧಿಸಿದ್ದರು.
ಶ್ರೀನಿಧಿ ನಂತರ ಡಬಲ್ಸ್ ವಿಭಾಗದಲ್ಲಿ ದೇಶಬಾಂಧವೆ ಜಾನ್ನೆಟ್ ಚಿರಿಪಲ್ ಜತೆಗೂಡಿ ಪ್ರಶಸ್ತಿ ಗೆದ್ದುಕೊಂಡರು. 2ನೇ ಶ್ರೇಯಾಂಕಿತ ಶ್ರೀನಿಧಿ-ಜಾನ್ನೆಟ್ ಜೋಡಿ ಸೆರ್ಬಿಯಾದ ಇನಾ ಇಲಿಕ್ ಮತ್ತು ಇಟಲಿಯ ಅಲೈಸ್ ಲೋಜಿ ವಿರುದ್ಧ 6-7, 6-3, 10-6ರಿಂದ ಗೆಲುವು ದಾಖಲಿಸಿದರು. ಶ್ರೀನಿಧಿಗೆ ಡಬಲ್ಸ್ ವಿಭಾಗದಲ್ಲಿ ಇದು 4ನೇ ಐಟಿಎ್ ಪ್ರಶಸ್ತಿ ಗೆಲುವಾಗಿದೆ.