ಕ್ರೀಡೆ

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಏಟು, ರೈಲ್ವೇಸ್​ ಎದಿರೇಟು; ಇನಿಂಗ್ಸ್​ ಮುನ್ನಡೆಗಾಗಿ ಪೈಪೋಟಿ

ಸೂರತ್​: ಸಂಘಟಿತ ಬೌಲಿಂಗ್​ ನಿರ್ವಹಣೆಯೊಂದಿಗೆ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 5ನೇ ಲೀಗ್​ ಪಂದ್ಯದಲ್ಲಿ ಆತಿಥೇಯ ರೈಲ್ವೇಸ್​ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರೂ, ಬ್ಯಾಟಿಂಗ್​ ವಿಭಾಗದ ವೈಫಲ್ಯದಿಂದಾಗಿ ಎದಿರೇಟು ಎದುರಿಸಿದೆ. ಇದರಿಂದಾಗಿ ಪಂದ್ಯದ 2ನೇ ದಿನ ಯಾವ ತಂಡ ಮೊದಲ ಇನಿಂಗ್ಸ್​ ಮುನ್ನಡೆ ಸಾಧಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಲಾಲ್​ಬಾಯಿ ಕಂಟ್ರಾಕ್ಟರ್​ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಸಿ ಗುಂಪಿನ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ರೈಲ್ವೇಸ್​, 56 ಓವರ್​ಗಳಲ್ಲಿ 155 ರನ್​ಗಳಿಗೆ ಸರ್ವಪತನ ಕಂಡಿತು. ವಾಸುಕಿ ಕೌಶಿಕ್​ ಮತ್ತು ಹಾರ್ದಿಕ್​ ರಾಜ್​ ತಲಾ 3 ವಿಕೆಟ್​ ಕಬಳಿಸಿದರೆ, ವಿದ್ವತ್​ ಕಾವೇರಪ್ಪ ಮತ್ತು ವೈಶಾಕ್​ ವಿಜಯ್​ಕುಮಾರ್​ ತಲಾ 2 ವಿಕೆಟ್​ ಪಡೆದರು. ಪ್ರತಿಯಾಗಿ ಕರ್ನಾಟಕ ತಂಡ ಬ್ಯಾಟಿಂಗ್​ ವಿಭಾಗದ ವೈಫಲ್ಯ ಮುಂದುವರಿಸಿದ್ದು, ದಿನದಂತ್ಯಕ್ಕೆ 27.5 ಓವರ್​ಗಳಲ್ಲಿ 6 ವಿಕೆಟ್​ಗೆ 90 ರನ್​ ಗಳಿಸಿದೆ. ರಾಜ್ಯ ತಂಡ ಇನ್ನೂ 65 ರನ್​ ಹಿನ್ನಡೆಯಲ್ಲಿದೆ. ಹಾರ್ದಿಕ್​ ರಾಜ್​ (1) ಔಟಾದ ಬೆನ್ನಲ್ಲೇ ದಿನದಾಟ ಕೊನೆಗೊಂಡಿತು. ಇದರಿಂದ ಕಿಶನ್​ ಬಿದರೆ (2*) ಏಕಾಂಗಿಯಾಗಿ ಕ್ರೀಸ್​ನಲ್ಲಿದ್ದಾರೆ.

ರೈಲ್ವೇಸ್​: 56 ಓವರ್​ಗಳಲ್ಲಿ 155 (ಪ್ರಥಮ್​ ಸಿಂಗ್​ 56, ಮೊಹಮದ್​ ಸೈಫ್​ 45, ವಿದ್ವತ್​ 25ಕ್ಕೆ 2, ಕೌಶಿಕ್​ 22ಕ್ಕೆ 3, ವೈಶಾಕ್​ 57ಕ್ಕೆ 2, ಹಾರ್ದಿಕ್​ ರಾಜ್​ 28ಕ್ಕೆ 3), ಕರ್ನಾಟಕ: 27.5 ಓವರ್​ಗಳಲ್ಲಿ 6 ವಿಕೆಟ್​ಗೆ 90 (ಸಮರ್ಥ್​ 22, ನಿಶ್ಚಲ್​ 20, ಅನೀಶ್​ 27, ನಿಕಿನ್​ ಜೋಸ್​ 0, ಮನೀಷ್​ ಪಾಂಡೆ 18, ಹಾರ್ದಿಕ್​ ರಾಜ್​ 1, ಕಿಶನ್​ ಬಿದರೆ 2*, ಆಕಾಶ್​ ಪಾಂಡೆ 21ಕ್ಕೆ 3, ಅಯನ್​ 18ಕ್ಕೆ 2).

ಕುಸಿದ ಕರ್ನಾಟಕ

ಇನಿಂಗ್ಸ್​ ಮುನ್ನಡೆಯ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಕರ್ನಾಟಕ ತಂಡ 57 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಡಿ. ನಿಶ್ಚಲ್​ (20), ಆರ್​. ಸಮರ್ಥ್​ (22) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಹಂಗಾಮಿ ನಾಯಕ ನಿಕಿನ್​ ಜೋಸ್​ ಖಾತೆಯನ್ನೇ ತೆರೆಯದೆ ಗೋಲ್ಡನ್​ ಡಕ್​ಗೆ ಬಲಿಯಾದರು. ದಿನದಂತ್ಯದಲ್ಲಿ ರಾಜ್ಯ ತಂಡ 7 ರನ್​ ಅಂತರದಲ್ಲಿ ಮತ್ತೆ 3 ವಿಕೆಟ್​ ಕಳೆದುಕೊಂಡಿತು. ಮಯಾಂಕ್​ ಗೈರಿನಲ್ಲಿ ಮನೀಷ್​ ಪಾಂಡೆ (18) ಅನುಭವದ ಬಲ ತುಂಬುವ ನಿರೀೆ ಹುಸಿಯಾಯಿತು.

*55: ನಿಕಿನ್​ ಜೋಸ್​ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ 55ನೇ ಆಟಗಾರ ಎನಿಸಿದರು.

ಮರಳಿದ ಮನೀಷ್​

ವಿಮಾನದಲ್ಲಿ ದಿಢೀರ್​ ಅಸ್ವಸ್ಥಗೊಂಡು ಅಲಭ್ಯರಾಗಿರುವ ನಾಯಕ ಮಯಾಂಕ್​ ಅಗರ್ವಾಲ್​ ಬದಲಿಗೆ ಮನೀಷ್​ ಪಾಂಡೆ ರಾಜ್ಯ ತಂಡಕ್ಕೆ ಮರಳಿದರು. ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ಗಾಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದರು. ಇನ್ನು ರಾಜ್ಯ ತಂಡ ತ್ರಿವಳಿ ವೇಗಿಗಳೊಂದಿಗೆ ಏಕೈಕ ಸ್ಪಿನ್ನರ್​ ಆಡಿಸುವ ಕಾರ್ಯತಂತ್ರಕ್ಕೆ ಮೊರೆ ಹೋದ ಕಾರಣ ಶಶಿಕುಮಾರ್​ ಬದಲಿಗೆ ಡಿ. ನಿಶ್ಚಲ್​ ಆರಂಭಿಕರಾಗಿ ಮರಳಿದರು. 17 ವರ್ಷದ ಹಾರ್ದಿಕ್​ ರಾಜ್​ ತಂಡದ ಏಕೈಕ ಸ್ಪಿನ್ನರ್​ ಆಗಿದ್ದಾರೆ.