ವಿಜಯವಾಣಿ ಸುದ್ದಿಜಾಲ ಮಂಗಳೂರು
ಆತಿಥೇಯ ಕರ್ನಾಟಕ ತಂಡ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಷಿಪ್ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ಪ್ರಶಸ್ತಿಯನ್ನು ಉಳಿಸಿಕೊಂಡ ಕರ್ನಾಟಕ, ದೇಶೀಯ ಈಜು ಸ್ಪರ್ಧೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.
ಮಂಗಳೂರಿನ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕೂಟದಲ್ಲಿ ಕರ್ನಾಟಕ ತಂಡ ಒಟ್ಟು 17 ಚಿನ್ನ, 12 ಬೆಳ್ಳಿ, 4 ಕಂಚಿನ ಸಹಿತ 33 ಪದಕಗಳನ್ನು ಗೆದ್ದುಕೊಂಡು, 274 ಅಂಕಗಳೊಂದಿಗೆ ಪ್ರಶಸ್ತಿ ಗೆದ್ದುಕೊಂಡರೆ, ಮಹಾರಾಷ್ಟ್ರ (167 ಅಂಕ) ರನ್ನರ್ಅಪ್ ಸ್ಥಾನ ಪಡೆಯಿತು. ಕರ್ನಾಟಕ ತಂಡ ಪುರುಷರ (11 ಚಿನ್ನ, 7 ಬೆಳ್ಳಿ, 1 ಕಂಚು, 156 ಅಂಕ) ಮತ್ತು ಮಹಿಳೆಯರ (6 ಚಿನ್ನ, 5 ಬೆಳ್ಳಿ, 3 ಕಂಚು, 118 ಅಂಕ) ವಿಭಾಗದಲ್ಲೂ ಟೀಮ್ ಚಾಂಪಿಯನ್ಷಿಪ್ ಗೆದ್ದುಕೊಂಡಿತು. ಕೂಟದಲ್ಲಿ ಒಟ್ಟು 5 ಹೊಸ ದಾಖಲೆಗಳು ನಿರ್ಮಾಣಗೊಂಡವು.
ಕೂಟದಲ್ಲಿ 4 ಸ್ವರ್ಣ ಪದಕ ಗೆದ್ದುಕೊಂಡ ರಾಜ್ಯದ ಅನೀಶ್ ಎಸ್. ಗೌಡ ಪುರುಷರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡರೆ, ಮಹಿಳೆಯರ ವಿಭಾಗದಲ್ಲಿ ಒಂದು ಕೂಟ ದಾಖಲೆಯೊಂದಿಗೆ 3 ಚಿನ್ನ, 1 ಬೆಳ್ಳಿ ಪದಕ ಜಯಿಸಿದ ರಾಜ್ಯದ ಹಷಿಕಾ ರಾಮಚಂದ್ರ ಅತ್ಯುತ್ತಮ ಈಜುಪಟು ಪ್ರಶಸ್ತಿಗೆ ಭಾಜನರಾದರು.
ಕೊನೇ ದಿನ ರಾಜ್ಯಕ್ಕೆ 5 ಸ್ವರ್ಣ
ಕೂಟದ 4ನೇ ಹಾಗೂ ಅಂತಿಮ ದಿನ ಕರ್ನಾಟಕದ ಈಜುಪಟುಗಳು ಮತ್ತೆ 5 ಚಿನ್ನ, 1 ಬೆಳ್ಳಿ, 2 ಕಂಚಿನ ಸಹಿತ ಒಟ್ಟು 8 ಪದಕಗಳನ್ನು ಗೆದ್ದುಕೊಂಡರು. ರಾಜ್ಯದ ತಾನ್ಯಾ ಷಡಕ್ಷರಿ, ಹಷಿಕಾ ರಾಮಚಂದ್ರ, ಅನೀಶ್ ಎಸ್. ಗೌಡ, ವಿದಿತ್ ಎಸ್. ಶಂಕರ್ ಸ್ವರ್ಣ ಗೆದ್ದರು.
ತಾನ್ಯಾ ಷಡಕ್ಷರಿ ಮಹಿಳೆಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 5 ನಿಮಿಷ, 8.10 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನಕ್ಕೆ ಮುತ್ತಿಟ್ಟರೆ, ಹಷಿಕಾ ರಾಮಚಂದ್ರ ಮಹಿಳೆಯರ 200 ಮೀ. ಫ್ರೀಸ್ಟೆ$ಲ್ ವಿಭಾಗದಲ್ಲಿ 2 ನಿಮಿಷ, 6.49 ಸೆಕೆಂಡ್ಗಳಲ್ಲಿ ಈಜಿ ಚಿನ್ನಕ್ಕೆ ಕೊರಳೊಡ್ಡಿದರು.
ಅನೀಶ್ ಎಸ್. ಗೌಡ ಪುರುಷರ 200 ಮೀ. ಫ್ರೀಸ್ಟೆ$ಲ್ ವಿಭಾಗದಲ್ಲಿ 1 ನಿಮಿಷ, 52.09 ಸೆಕೆಂಡ್ಗಳಲ್ಲಿ ಈಜಿ ಕೊನೇ ದಿನವೂ ಚಿನ್ನದ ಪದಕ ಒಲಿಸಿಕೊಂಡರೆ, ವಿದಿತ್ ಎಸ್. ಶಂಕರ್ ಪುರುಷರ 100 ಮೀ. ಬ್ರೆಸ್ಟ್ ಸ್ಟ್ರೊಕ್ ವಿಭಾಗದಲ್ಲಿ 1 ನಿಮಿಷ, 2.75 ಸೆಕೆಂಡ್ಗಳಲ್ಲಿ ಈಜಿ ಚಿನ್ನ ಗೆದ್ದುಕೊಂಡರು. ಪುರುಷರ 200 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ರಾಜ್ಯದ ಆಕಾಶ್ ಮಣಿ ಮತ್ತು ಮಹಿಳೆಯರ 100 ಮೀ. ಬಟರ್್ಲೆ$ ವಿಭಾಗದಲ್ಲಿ ಸುಹಾಸಿನಿ ಘೋಷ್ ಕಂಚಿನ ಪದಕ ಜಯಿಸಿದರು.
ರಾಜ್ಯ ಪುರುಷರ ರಿಲೇ ತಂಡದಿಂದ ದಾಖಲೆ
ಒಲಿಂಪಿಯನ್ ಶ್ರೀಹರಿ ನಟರಾಜ್, ಆಕಾಶ್ ಮಣಿ, ಪೃಥ್ವಿ ಎಂ, ಕಾರ್ತಿಕೇಯನ್ ನಾಯರ್ ಒಳಗೊಂಡ ರಾಜ್ಯ ತಂಡ, ಪುರುಷರ 4/100 ಮೀ. ಫ್ರೀಸ್ಟೆ$ಲ್ ರಿಲೇ ಸ್ಪರ್ಧೆಯಲ್ಲಿ ನೂತನ ಕೂಟದಾಖಲೆಯೊಂದಿಗೆ ಸ್ವರ್ಣ ಪದಕ ಗೆದ್ದುಕೊಂಡಿತು. ರಾಜ್ಯ ತಂಡ 3 ನಿಮಿಷ, 28.09 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ 2023ರಲ್ಲಿ ತಾನೇ ನಿರ್ಮಿಸಿದ್ದ 3 ನಿಮಿಷ, 28.16 ಸೆಕೆಂಡ್ಗಳ ದಾಖಲೆಯನ್ನು ಸುಧಾರಿಸಿಕೊಂಡಿತು. ಮಹಿಳೆಯರ 4/100 ಮೀ. ಫ್ರೀಸ್ಟೆ$ಲ್ ರಿಲೇ ಸ್ಪರ್ಧೆಯಲ್ಲಿ ರೈಲ್ವೇಸ್ ತಂಡ 4 ನಿಮಿಷ, 2.24 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ರಾಷ್ಟ್ರೀಯ ದಾಖಲೆ ಬರೆಯಿತು. ಕರ್ನಾಟಕದ ಹಷಿಕಾ ರಾಮಚಂದ್ರ, ವಿಹಿತಾ ನಯನಾ ಲೋಕನಾಥನ್, ಶಾಲಿನಿ ಆರ್. ದೀತ್, ಶಿರಿನ್ ಒಳಗೊಂಡ ತಂಡ ಈ ಸ್ಪರ್ಧೆಯಲ್ಲಿ (4 ನಿಮಿಷ, 2.62) ರಜತ ಪದಕ ಗೆದ್ದುಕೊಂಡಿತು.