ಕ್ರೀಡೆ

ಏಷ್ಯಾಡ್​ ನಿಯಮದಿಂದ ಕನ್ನಡಿಗ ಮನುಗೆ ತಪ್ಪಿದ ಸ್ಪರ್ಧೆ ಅವಕಾಶ

ಬೆಂಗಳೂರು: ಇತ್ತೀಚೆಗೆ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಕನ್ನಡಿಗ ಮನು ಡಿ.ಪಿ. ಸಹಿತ ಭಾರತದ ಮೂವರು ಜಾವೆಲಿನ್​ ಎಸೆತಗಾರರು ಅಗ್ರ-6ರಲ್ಲಿ ಸ್ಥಾನ ಪಡೆದು ಮಿಂಚಿದ್ದರು. ಆದರೆ ಮುಂಬರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ಈ ರೀತಿ ಪ್ರಾಬಲ್ಯ ಸಾಧಿಸಲು ಅವಕಾಶ ಇಲ್ಲದಂತಾಗಿದೆ. ಏಷ್ಯಾಡ್​ ನಿಯಮದ ಪ್ರಕಾರ, ಅಥ್ಲೆಟಿಕ್ಸ್​ನ ಒಂದು ಸ್ಪರ್ಧೆಯಲ್ಲಿ ಒಂದು ದೇಶದಿಂದ ಗರಿಷ್ಠ ಇಬ್ಬರಷ್ಟೇ ಸ್ಪರ್ಧಿಸಲು ಅವಕಾಶ ಇರುವುದರಿಂದ ಮನು ಅವಕಾಶ ವಂಚಿತರಾಗಿದ್ದಾರೆ.

ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ನೀರಜ್​ ಚೋಪ್ರಾ ಸಹಜವಾಗಿಯೇ ಭಾರತದ ಮೊದಲ ಆಯ್ಕೆಯ ಸ್ಪರ್ಧಿಯಾಗಿದ್ದರೆ, ಮನುಗಿಂತ (84.35 ಮೀ) ಹೆಚ್ಚಿನ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯ ದಾಖಲೆ ಹೊಂದಿರುವುದರಿಂದ ಒಡಿಶಾದ ಕಿಶೋರ್​ ಜೆನಾ (84.77 ಮೀ) ಭಾರತದ 2ನೇ ಆಯ್ಕೆಯ ಜಾವೆಲಿನ್​ ಎಸೆತಗಾರರಾಗಿದ್ದಾರೆ. ಹೀಗಾಗಿ ಇನ್ನು ನೀರಜ್​ ಅಥವಾ ಕಿಶೋರ್​ ಏಷ್ಯಾಡ್​ನಿಂದ ಹೊರಗುಳಿದರಷ್ಟೇ ಮನುಗೆ ಅವಕಾಶ ಲಭಿಸಲಿದೆ ಎಂದು ಮನು ಅವರ ಕೋಚ್​ ಆಗಿರುವ ಕನ್ನಡಿಗ ಕಾಶಿನಾಥ್​ ನಾಯ್ಕ್​ "ವಿಜಯವಾಣಿ'ಗೆ ತಿಳಿಸಿದ್ದಾರೆ.

ಏಷ್ಯಾಡ್​ಗೆ ಜಾವೆಲಿನ್​ ಎಸೆತದಲ್ಲಿ ಅರ್ಹತಾ ಮಾನದಂಡ 78.23 ಮೀ. ಆಗಿದ್ದು, ಮನು ಮಾತ್ರವಲ್ಲದೆ ಭಾರತದ ಇನ್ನಿಬ್ಬರು ಜಾವೆಲಿನ್​ ಎಸೆತಗಾರರಾದ ರೋಹಿತ್​ ಯಾದವ್​ (83.28 ಮೀ) ಮತ್ತು ಶಿವಪಾಲ್​ ಸಿಂಗ್​ (81.96 ಮೀ) ಕೂಡ ಅದಕ್ಕಿಂತ ಉತ್ತಮ ದಾಖಲೆ ಹೊಂದಿದ್ದರೂ, ಏಷ್ಯಾಡ್​ ನಿಯಮದಿಂದಾಗಿ ಪದಕ ಸ್ಪರ್ಧೆ ತಪ್ಪಿಸಿಕೊಂಡಿದ್ದಾರೆ. ಒಟ್ಟಾರೆ ಈ ಬೆಳವಣಿಗೆ, ಜಾವೆಲಿನ್​ ಎಸೆತದಲ್ಲಿ ಭಾರತ ಶಕ್ತಿಕೇಂದ್ರವಾಗಿ ರೂಪುಗೊಳ್ಳುತ್ತಿರುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಒಲಿಂಪಿಕ್ಸ್​, ಕಾಮನ್ವೆಲ್ತ್​ ಗೇಮ್ಸ್​ ಮತ್ತು ವಿಶ್ವ ಚಾಂಪಿಯನ್​ಷಿಪ್​ಗಳಲ್ಲಿ ಒಂದು ಸ್ಪರ್ಧೆಯಲ್ಲಿ ಒಂದು ದೇಶದಿಂದ ಗರಿಷ್ಠ ಮೂವರು ಸ್ಪರ್ಧಿಗಳು ಭಾಗವಹಿಸಲು ಅವಕಾಶವಿದ್ದರೂ, ಏಷ್ಯಾಡ್​ನಲ್ಲಿ ಮಾತ್ರ ಇದು ಇಬ್ಬರಿಗೆ ಸೀಮಿತಗೊಂಡಿದೆ.