ಕ್ರೀಡೆ

ನೀವಿಬ್ಬರು ಮೊದಲು ಈ ಇಬ್ಬರು ದಿಗ್ಗಜರೊಂದಿಗೆ ಮಾತನಾಡಿ! ವಿರಾಟ್​, ರೋಹಿತ್​ಗೆ ಕಪಿಲ್​ ಕಿವಿಮಾತು | Kapil Dev

ಮೋಹನ್​ ಶೆಟ್ಟಿ

Kapil Dev: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್​-ಗವಾಸ್ಕರ್​ ಟ್ರೋಫಿಯಿಂದ ಹಿಡಿದು ದೇಶಿಯ ರಣಜಿ ಟ್ರೋಫಿ ಮತ್ತು ಇಂಗ್ಲೆಂಡ್​ ಸರಣಿಯವರೆಗೂ ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸುತ್ತಿರುವ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ಗಳಿಗೆ ಭಾರತದ ಮಾಜಿ ಕ್ಯಾಪ್ಟನ್​, ದಿಗ್ಗಜ ಆಟಗಾರ ಕಪಿಲ್ ದೇವ್​ ಮಹತ್ವದ ಸಲಹೆ ನೀಡಿದ್ದಾರೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ಮಾಡಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮ, ಮಾಜಿ ಕ್ರಿಕೆಟಿಗರಿಂದ ಹಿಡಿದು ಕ್ರೀಡಾಭಿಮಾನಿಗಳ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ರೋಹಿತ್ ಅಬ್ಬರದ ಬ್ಯಾಟಿಂಗ್ ನಡೆಸಿ, ಭರ್ಜರಿ ಶತಕ ದಾಖಲಿಸಿದ್ದು ಇತಿಹಾಸ. ರೋಹಿತ್ ಸೆಂಚುರಿ ಬಾರಿಸಿ ಟೀಕೆಗಳಿಂದ ದೂರ ಉಳಿದರೆ, ಕೊಹ್ಲಿ ಮಾತ್ರ ಇನ್ನೂ ಅದೇ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದಾರೆ. ಸದ್ಯ ಇದೇ ವಿಷಯವನ್ನು ಪ್ರಸ್ತಾಪಿಸಿದ ಕಪಿಲ್ ದೇವ್​, ರೋಹಿತ್ ಮತ್ತು ಕೊಹ್ಲಿ ಮೊದಲು ಸುನಿಲ್ ಗವಾಸ್ಕರ್​ ಮತ್ತು ರಾಹುಲ್​ ದ್ರಾವಿಡ್​ರೊಂದಿಗೆ ಚರ್ಚಿಸಿ ಎಂದಿದ್ದಾರೆ.

"ರಾಹುಲ್ ಡ್ರಾವಿಡ್​ ಮತ್ತು ಸುನಿಲ್ ಗವಾಸ್ಕರ್​ ಅವರೊಂದಿಗೆ ನಿಮ್ಮ ಬ್ಯಾಟಿಂಗ್ ಸಮಸ್ಯೆ ಬಗ್ಗೆ ಚರ್ಚಿಸಿ. ಇದರೊಟ್ಟಿಗೆ ನಿಮ್ಮ ಅದ್ಭುತ ಇನ್ನಿಂಗ್ಸ್​ಗಳ ವಿಡಿಯೋಗಳನ್ನು ಒಮ್ಮೆ ನೋಡಿ. ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನಲ್ಲಿಲ್ಲದಿದ್ದಾಗ, ಇಂತಹ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಯದಲ್ಲಿ ಹಿರಿಯ ಕ್ರಿಕೆಟಿಗರ ಜತೆ ಮಾತನಾಡುವುದು ಉತ್ತಮ ಪರಿಹಾರ. ನಿಮ್ಮದೇ ಅತ್ಯುತ್ತಮ ಇನ್ನಿಂಗ್ಸ್​ನ ವಿಡಿಯೋ ನೋಡಿ ತಪ್ಪನ್ನು ಸರಿಪಡಿಸಿಕೊಳ್ಳುವುದು ಒಳಿತು. ನೀವು ಮತ್ತೆ 22-25 ವರ್ಷದ ಕೊಹ್ಲಿ ಅಥವಾ ರೋಹಿತ್ ಆಗಲು ಸಾಧ್ಯವಿಲ್ಲ" ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).