ಬೆಂಗಳೂರು: ಕರ್ನಾಟಕ ಕ್ರಿಕೆಟ್ ಇತ್ತೀಚೆಗೆ ಸಾಲು ಸಾಲು ಯಶಸ್ಸನ್ನು ಕಾಣುತ್ತಿದೆ. ದೇಶೀಯ ಮಹಿಳೆಯರ 19 ವಯೋಮಿತಿ ಟಿ20 ಟ್ರೋಫಿ, ಪುರುಷರ ವಿಭಾಗದಲ್ಲಿ 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ, 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ ರಾಜ್ಯ ತಂಡ ಪ್ರಶಸ್ತಿ ಗೆದ್ದು ಬೀಗಿದ್ದು, ಭವಿಷ್ಯದ ಬಗ್ಗೆ ಭವ್ಯ ಭರವಸೆ ಹರಡಿದೆ. ಇದರ ಬೆನ್ನಲ್ಲೇ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಆರ್ಸಿಬಿ ಮಹಿಳೆಯರು ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಬರೆದರು. ಇದೀಗ ಐಪಿಎಲ್ 17ನೇ ಆವೃತ್ತಿಯಲ್ಲೂ ರಾಜ್ಯದ ಕ್ರಿಕೆಟ್ ಪ್ರೇಮಿಗಳು ಆರ್ಸಿಬಿ ತಂಡದ ಜತೆಗೆ ವಿವಿಧ ತಂಡಗಳಲ್ಲಿರುವ ಕನ್ನಡಿಗರ ಆಟವನ್ನೂ ಸಂಭ್ರಮಿಸಲು ಆರಂಭಿಸಿದ್ದಾರೆ. ಕರ್ನಾಟಕದ ಒಟ್ಟು 12 ಆಟಗಾರರು ಕಣದಲ್ಲಿದ್ದು, ವೇಗಿ ಪ್ರಸಿದ್ಧ ಕೃಷ್ಣ ಗಾಯಗೊಂಡಿರುವ ಕಾರಣ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಸಿಎಸ್ಕೆ ತಂಡದಲ್ಲಿ ರಾಜ್ಯದ ಕ್ರಿಕೆಟಿಗರು ಇಲ್ಲದಿದ್ದರೂ, ಬೆಂಗಳೂರು ಮೂಲದ ಕಿವೀಸ್ ಕ್ರಿಕೆಟಿಗ ರಚಿನ್ ರವೀಂದ್ರ ಇರುವುದರಿಂದ ಈ ಬಾರಿ ಟೂರ್ನಿಯಲ್ಲಿ ಆಡುವ ಬಹುತೇಕ ಎಲ್ಲ ತಂಡಗಳಲ್ಲಿ ಕನ್ನಡಿಗರು ಇರುವಂತಾಗಿದೆ.
ಲಖನೌ ಸೂಪರ್ಜೈಂಟ್ಸ್
(ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಕೆ. ಗೌತಮ್)
ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ಜೈಂಟ್ಸ್ ಈ ಬಾರಿ ಕರ್ನಾಟಕದ ಗರಿಷ್ಠ 3 ಆಟಗಾರರನ್ನು ಹೊಂದಿರುವುದು ವಿಶೇಷವಾಗಿದೆ. ಫಿಟ್ನೆಸ್ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಐಪಿಎಲ್ನಲ್ಲಿ ಮಿಂಚುವ ಮೂಲಕ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಸಂಪಾದಿಸಲು ಹೋರಾಡಲಿದ್ದಾರೆ. ಇತ್ತೀಚೆಗೆ ಟೆಸ್ಟ್ ಪದಾರ್ಪಣೆ ಮಾಡಿರುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್ನಲ್ಲಿದ್ದು, ದೇಶೀಯ ಕ್ರಿಕೆಟ್ ರನ್ಪ್ರವಾಹವನ್ನು ಐಪಿಎಲ್ನಲ್ಲೂ ಮುಂದುವರಿಸುವ ನಿರೀಕ್ಷೆ ಇದೆ. ಅವರು ಈ ಬಾರಿ ರಾಜಸ್ಥಾನದಿಂದ ಲಖನೌ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಇನ್ನು ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡದಿಂದ ಹೊರಬಿದ್ದಿದ್ದ ಆಲ್ರೌಂಡರ್ ಕೆ. ಗೌತಮ್ ಐಪಿಎಲ್ನಲ್ಲಿ ತನ್ನ ಪ್ರಾಮುಖ್ಯತೆ ಸಾರುವ ಹಂಬಲದಲ್ಲಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್
(ಮಯಾಂಕ್ ಅಗರ್ವಾಲ್)
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿ ಹೆಚ್ಚಿನ ಯಶಸ್ಸು ತಂದುಕೊಡಲು ವಿಲರಾಗಿರುವ ಆರಂಭಿಕ ಮಯಾಂಕ್ ಅಗರ್ವಾಲ್, ಸನ್ರೈಸರ್ಸ್ ಪರ ಬ್ಯಾಟಿಂಗ್ನಲ್ಲಿ ಯಶ ಕಾಣುವ ತವಕದಲ್ಲಿದ್ದಾರೆ. ರಣಜಿ ವೇಳೆ ವಿಮಾನ ಪ್ರಯಾಣದಲ್ಲಿ ಕಲುಷಿತ ನೀರು ಕುಡಿದು ಆರೋಗ್ಯ ಕೆಡಿಸಿಕೊಂಡಿದ್ದ ಮಯಾಂಕ್, ಐಪಿಎಲ್ನಲ್ಲಿ ತನ್ನ ಹಿಂದಿನ ಲಯಕ್ಕೆ ಮರಳಬೇಕಾಗಿದೆ.
ಕೆಕೆಆರ್
(ಮನೀಷ್ ಪಾಂಡೆ)
ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ನಲ್ಲಿ ರನ್ಬರ ಎದುರಿಸಿದ್ದ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಖರೀದಿ ಈ ಬಾರಿ ಹರಾಜಿನಲ್ಲಿ ಯಾವುದೇ ತಂಡ ಮೊದಲ ಸುತ್ತಿನಲ್ಲಿ ಆಸಕ್ತಿ ತೋರಿರಲಿಲ್ಲ. 2ನೇ ಸುತ್ತಿನಲ್ಲಿ ಕೆಕೆಆರ್ 50 ಲಕ್ಷ ರೂ. ಮೂಲಬೆಲೆಗೆ ಖರೀದಿಸಿ 34 ವರ್ಷದ ಮನೀಷ್ ವೃತ್ತೀಜಿವನಕ್ಕೆ ಮರುಹುಟ್ಟು ನೀಡಿದೆ. 7 ವರ್ಷಗಳ ಬಳಿಕ ಕೆಕೆಆರ್ ತಂಡಕ್ಕೆ ಮರಳಿರುವ ಮನೀಷ್, ಹಿಂದೆ ಗೌತಮ್ ಗಂಭೀರ್ ನಾಯಕತ್ವದಡಿಯಲ್ಲಿ ತೋರಿದ್ದ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯನ್ನು ಈ ಬಾರಿ ಅವರ ಮಾರ್ಗದರ್ಶನದಲ್ಲೂ ಮರುಕಳಿಸಬೇಕಾಗಿದೆ.
ಗುಜರಾತ್ ಟೈಟಾನ್ಸ್
(ಅಭಿನವ್ ಮನೋಹರ್, ಬಿಆರ್ ಶರತ್)
ಕಳೆದ 2 ಆವೃತ್ತಿಗಳಿಂದ ಗುಜರಾತ್ ಪರ ಮಿಂಚುತ್ತಿರುವ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಈ ಸಲವೂ ಅದೇ ತಂಡದಲ್ಲಿದ್ದಾರೆ. ಆದರೆ ಈ ಬಾರಿ ಅವರು ಹಾರ್ದಿಕ್ ಪಾಂಡ್ಯ ಬದಲಿಗೆ ಶುಭಮಾನ್ ಗಿಲ್ ನಾಯಕತ್ವದಡಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಜತೆಗೆ ರಾಜ್ಯದ ವಿಕೆಟ್ ಕೀಪರ್ ಬಿಆರ್ ಶರತ್ ಕೊನೇಕ್ಷಣದಲ್ಲಿ ಬದಲಿ ಆಟಗಾರನಾಗಿ ಗುಜರಾತ್ ತಂಡ ಸೇರಿದ್ದಾರೆ.
ಪಂಜಾಬ್ ಕಿಂಗ್ಸ್
(ವಿದ್ವತ್ ಕಾವೇರಪ್ಪ)
ಕಳೆದ ಆವೃತ್ತಿಯಲ್ಲಿ 20 ಲಕ್ಷ ರೂ. ಮೂಲಬೆಲೆಗೆ ಪಂಜಾಬ್ ತಂಡ ಸೇರಿದ್ದ ಕೊಡಗಿನ ವೇಗಿ ವಿದ್ವತ್ ಕಾವೇರಪ್ಪ ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ. ಆದರೆ ಈ ಬಾರಿ ದೇಶೀಯ ಕ್ರಿಕೆಟ್ನಲ್ಲಿ ಗಮನಾರ್ಹ ನಿರ್ವಹಣೆ ತೋರಿರುವ ವಿದ್ವತ್, ರಣಜಿಯಲ್ಲಿ 5 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದರು. ಹೀಗಾಗಿ ಈ ಬಾರಿ ಅವರಿಗೆ ಆಡುವ 11ರ ಬಳಗದಲ್ಲೂ ಸ್ಥಾನ ಲಭಿಸುವ ನಿರೀಕ್ಷೆ ಇದೆ.
ಆರ್ಸಿಬಿ
(ವೈಶಾಕ್ ವಿಜಯ್ಕುಮಾರ್, ಮನೋಜ್ ಭಾಂಡಗೆ)
ತವರಿನ ಆರ್ಸಿಬಿ ತಂಡ ಈ ಬಾರಿ ಇಬ್ಬರು ಕನ್ನಡಿಗರನ್ನು ಒಳಗೊಂಡಿದೆ. ಕಳೆದ ವರ್ಷ ಟೂರ್ನಿಯ ನಡುವೆ ಬದಲಿ ಆಟಗಾರನಾಗಿ ತಂಡ ಸೇರಿದ್ದ ವೇಗಿ ವೈಶಾಕ್ ವಿಜಯ್ಕುಮಾರ್ 7 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿ ಗಮನಸೆಳೆದಿದ್ದರೆ, ಆಲ್ರೌಂಡರ್ ಮನೋಜ್ ಭಾಂಡಗೆ ಮೀಸಲು ಬಳಗದಲ್ಲೇ ಉಳಿದಿದ್ದರು. ಈ ಬಾರಿ ಹಲವು ವರ್ಷಗಳ ಬಳಿಕ ಆರ್ಸಿಬಿ 11ರ ಬಳಗದಲ್ಲಿ ಇಬ್ಬರು ಕನ್ನಡಿಗರನ್ನು ನೋಡುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್
(ಪ್ರವಿಣ್ ದುಬೆ)
ಕಳೆದ 4 ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ರಾಜ್ಯದ ಸ್ಪಿನ್ನರ್ ಪ್ರವಿಣ್ ದುಬೆ ಹೆಚ್ಚಿನ ಪಂದ್ಯ ಆಡುವ ಅವಕಾಶ ಸಿಗದಿದ್ದರೂ, ಈ ಸಲವೂ ರಿಟೇನ್ ಆಗಿದ್ದಾರೆ. ಡೆಲ್ಲಿ ಪರ ಇದುವರೆಗೆ ಒಟ್ಟಾರೆ 4 ಪಂದ್ಯ ಆಡಿರುವ ಪ್ರವಿಣ್, ಈ ಬಾರಿ ಹೆಚ್ಚಿನ ಪಂದ್ಯದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್
(ಶ್ರೇಯಸ್ ಗೋಪಾಲ್)
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೇರಳಕ್ಕೆ ವಲಸೆ ಹೋಗಿರುವ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಕಳೆದ ವರ್ಷದ ಹರಾಜಿನಲ್ಲಿ ಯಾವುದೇ ತಂಡಕ್ಕೆ ಮಾರಾಟವಾಗದೆ ನಿರಾಸೆ ಅನುಭವಿಸಿದ್ದರು. ಈ ಮುನ್ನ ರಾಜಸ್ಥಾನ ಪರ ಹ್ಯಾಟ್ರಿಕ್ ವಿಕೆಟ್ ಪಡೆದು ಗಮನಸೆಳೆದಿದ್ದ ಶ್ರೇಯಸ್, ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮುನ್ನ 2014ರಿಂದ 17ರವರೆಗೂ ಮುಂಬೈ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆಯದಿದ್ದ ಶ್ರೇಯಸ್ಗೆ ಈ ಬಾರಿ 11ರ ಬಳಗ ಸೇರುವ ನಿರೀಕ್ಷೆ ಇದೆ.