ಕ್ರೀಡೆ

ಭಾರತ ಕಿರಿಯರ ತಂಡಕ್ಕೆ ಗೆಲುವು ತಂದುಕೊಟ್ಟ ಕನ್ನಡಿಗ ಕಾರ್ತಿಕೇಯ

ಪುದುಚೇರಿ: ಕನ್ನಡಿಗ ಕಾರ್ತಿಕೇಯ ಕೆಪಿ (85*ರನ್​, 99 ಎಸೆತ, 9 ಬೌಂಡರಿ, 2 ಸಿಕ್ಸರ್​, 30ಕ್ಕೆ 2 ವಿಕೆಟ್​) ಆಲ್ರೌಂಡ್​ ನಿರ್ವಹಣೆಯ ಬಲದಿಂದ ಭಾರತ ತಂಡ 19 ವಯೋಮಿತಿಯ ಏಕದಿನ ಕ್ರಿಕೆಟ್​ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸೀಸ್​, ಮೊಹಮದ್​ ಇನಾನ್​ (32ಕ್ಕೆ 4) ದಾಳಿಗೆ ಕುಸಿದು 49.4 ಓವರ್​ಗಳಲ್ಲಿ 184 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಭಾರತ 32 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದಾಗ ಕಾರ್ತಿಕೇಯ, ನಾಯಕ ಮೊಹಮದ್​ ಅಮಾನ್​ (58*) ಜತೆ ಮುರಿಯದ 4ನೇ ವಿಕೆಟ್​ಗೆ 153 ರನ್​ ಸೇರಿಸಿ 36 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.