ಕ್ರೀಡೆ

ನಾಯಕತ್ವಕ್ಕೆ ಗುಡ್​ ಬೈ ಹೇಳಿದ ಕೇನ್​ ವಿಲಿಯಮ್ಸನ್​; ಟಿ-20 ವಿಶ್ವಕಪ್​ ಬಳಿಕ ನ್ಯೂಜಿಲೆಂಡ್​ಗೆ ಮತ್ತೆ ಮುಖಭಂಗ

ವೆಲ್ಲಿಂಗ್ಟನ್: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದ ಕಾರಣ ಸೂಪರ್​-08 ಹಂತಕ್ಕೇರಲು ವಿಫಲವಾದ ನ್ಯೂಜಿಲೆಂಡ್​ ತಂಡಕ್ಕೆ ಆಘಾತವೊಂದು ಎದುರಾಗಿದ್ದು, ಸೀಮಿತ ಓವರ್​ಗಳ ನಾಯಕತ್ವದಿಂದ ಕೇನ್​ ವಿಲಿಯಮ್ಸನ್​ ಕೆಳೆಗಿಳಿದಿದ್ದಾರೆ. ಇದಲ್ಲದೆ  2024–25ನೇ ಸಾಲಿನ ರಾಷ್ಟ್ರೀಯ ಗುತ್ತಿಗೆಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ನ್ಯೂಜಿಲೆಂಡ್​ ತಂಡವು ಅಫ್ಘಾನಿಸ್ತಾನ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧ ಸೋಲುವ ಮೂಲಕ ಸೂಪರ್​ 08 ಹಂತಕ್ಕೇರುವಲ್ಲಿ ವಿಫಲವಾಗಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದರ ಬೆನ್ನಲ್ಲೇ ನಾಯಕತ್ವ ಸ್ಥಾನವನ್ನು ಕೇನ್​ ವಿಲಿಯಮ್ಸನ್​ ತೊರೆದಿರುವುದು ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ, ಸ್ಟಾರ್ ಬ್ಯಾಟರ್ ತನ್ನ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ. 2022ರಲ್ಲಿ ಕೇನ್​ ವಿಲಿಯಮ್ಸನ್​ ಟೆಸ್ಟ್​ ನಾಯಕತ್ವವನ್ನು ತೊರೆದಿದ್ದರು. ಆ ಬಳಿಕ ವೇಗಿ ಟಿಮ್​ ಸೌಥಿರನ್ನು ಟೆಸ್ಟ್​ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು.

ಕ್ರಿಕೆಟ್‌ ಹೊರತಾಗಿ‌ನ ನನ್ನ ಬದುಕು ಬದಲಾಗಿದೆ. ಕುಟುಂಬದವರೊಂದಿಗೆ ಸಮಯ ಕಳೆಯುವುದು, ಅವರೊಂದಿಗೆ ತವರಿನಲ್ಲಿ ಅಥವಾ ವಿದೇಶಗಳಲ್ಲಿ ಉತ್ತಮ ಕ್ಷಣಗಳನ್ನು ಸಂಭ್ರಮಿಸಿವುದು ತುಂಬಾ ಮುಖ್ಯವೆನಿಸುತ್ತದೆ ಎಂದು ಕೇನ್​ ವಿಲಿಯಮ್ಸನ್​ ಹೇಳಿದ್ದಾರೆ.

100 ಟೆಸ್ಟ್‌, 165 ಏಕದಿನ ಹಾಗೂ 93 ಟಿ20 ಪಂದ್ಯಗಳಲ್ಲಿ ಆಡಿರುವ ವಿಲಿಯಮ್ಸನ್‌, ಮೂರೂ ಮಾದರಿಯಲ್ಲಿ ಕ್ರಮವಾಗಿ 40, 91 ಹಾಗೂ 75 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ ನ್ಯೂಜಿಲೆಂಡ್​ ತಂಡವು 2019 ಏಕದಿನ ವಿಶ್ವಕಪ್‌, 2021ರ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿತ್ತು. ಚೊಚ್ಚಲ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2015ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೇರಿದ ತಂಡದಲ್ಲೂ ವಿಲಿಯಮ್ಸನ್‌ ಆಡಿದ್ದರು.