ಕ್ರೀಡೆ

ಗಾಲೆ ಟೆಸ್ಟ್​ನಲ್ಲಿ ಕಮಿಂದು ಮೆಂಡಿಸ್​ ದಾಖಲೆಗಳ ಧಮಾಕಾ!

ಗಾಲೆ: ಕಮಿಂದು ಮೆಂಡಿಸ್​ (182*ರನ್​, 250 ಎಸೆತ, 16 ಬೌಂಡರಿ, 4 ಸಿಕ್ಸರ್​) ಭರ್ಜರಿ ಶತಕದೊಂದಿಗೆ ಬರೆದ ಅವಳಿ ದಾಖಲೆಗಳ ಧಮಾಕಾ ಮತ್ತು ಕುಸಲ್​ ಮೆಂಡಿಸ್​ (106*ರನ್​, 149 ಎಸೆತ, 6 ಬೌಂಡರಿ, 3 ಸಿಕ್ಸರ್​) ನೀಡಿದ ಸಮರ್ಥ ಬೆಂಬಲದ ಬಲದಿಂದ ಶ್ರೀಲಂಕಾ ತಂಡ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್​ನಲ್ಲಿ ಬೃಹತ್​ ಮೊತ್ತ ಪೇರಿಸಿ ಮೇಲುಗೈ ಸಾಧಿಸಿದೆ.

ಗಾಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶುಕ್ರವಾರ 3 ವಿಕೆಟ್​ಗೆ 306 ರನ್​ಗಳಿಂದ ದಿನದಾಟ ಮುಂದುವರಿಸಿದ ಲಂಕಾ, 5 ವಿಕೆಟ್​ಗೆ 602 ರನ್​ ಪೇರಿಸಿ ಡಿಕ್ಲೇರ್​ ಮಾಡಿಕೊಂಡಿತು. ಕಮಿಂದು&ಕುಸಲ್​ ಮುರಿಯದ 6ನೇ ವಿಕೆಟ್​ಗೆ 271 ಎಸೆತಗಳಲ್ಲಿ 200 ರನ್​ ಜತೆಯಾಟವಾಡಿದರು. ಪ್ರತಿಯಾಗಿ ದಿನದಂತ್ಯಕ್ಕೆ ಕಿವೀಸ್​ 2 ವಿಕೆಟ್​ಗೆ 22 ರನ್​ ಗಳಿಸಿ ಸಂಕಷ್ಟದಲ್ಲಿದೆ. ಕೇನ್​ ವಿಲಿಯಮ್ಸನ್​ (6*) ಜತೆಗೆ ಖಾತೆ ತೆರೆಯದ ನೈಟ್​ ವಾಚ್​ಮನ್​ ಅಜಾಜ್​ ಪಟೇಲ್​ ಕ್ರೀಸ್​ನಲ್ಲಿದ್ದಾರೆ. ಕಿವೀಸ್​ ಸದ್ಯ 580 ರನ್​ ಹಿನ್ನಡೆಯಲ್ಲಿದ್ದು, ಫಾಲೋಆನ್​ ತಪ್ಪಿಸಿಕೊಳ್ಳಲು ಇನ್ನೂ 381 ರನ್​ ಗಳಿಸಬೇಕಿದೆ.

ಅವಳಿ ದಾಖಲೆಗಳ ಕಮಾಲ್​

ಎಡಗೈ ಬ್ಯಾಟರ್​ ಕಮಿಂದು ಮೆಂಡಿಸ್​ ತಾನಾಡಿದ 13 ಟೆಸ್ಟ್​ ಇನಿಂಗ್ಸ್​ಗಳಲ್ಲೇ 5 ಶತಕ ಸಿಡಿಸಿದ್ದು, ಏಷ್ಯಾದ ಅತಿವೇಗದ ಸಾಧಕ ಎನಿಸಿದ್ದಾರೆ. ಪಾಕಿಸ್ತಾನದ ವಾದ್​ ಅಲಮ್​ 22 ಇನಿಂಗ್ಸ್​ಗಳಲ್ಲಿ 5 ಶತಕ ಸಿಡಿಸಿದ್ದು ಹಿಂದಿನ ದಾಖಲೆ. ಒಟ್ಟಾರೆಯಾಗಿ ಕಮಿಂದು 3ನೇ ಅತಿವೇಗದ ಸಾಧಕರಾಗಿದ್ದು, ದಿಗ್ಗಜ ಡಾನ್​ ಬ್ರಾಡ್ಮನ್​ (13) ಸಾಧನೆ ಸರಿಗಟ್ಟಿದ್ದಾರೆ. ವಿಂಡೀಸ್​ನ ಎವರ್ಟನ್​ ವೀಕ್ಸ್​ 10 ಇನಿಂಗ್ಸ್​ಗಳಲ್ಲೇ 5 ಶತಕ ಸಿಡಿಸಿದ್ದು ವಿಶ್ವದಾಖಲೆಯಾಗಿದ್ದರೆ, ಇಂಗ್ಲೆಂಡ್​ನ ಹರ್ಬೆರ್ಟ್​ ಸಟ್​ಕ್ಲ್​ಿ ಮತ್ತು ಆಸೀಸ್​ನ ನೀಲ್​ ಹಾರ್ವೆ ತಲಾ 12 ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್​ನ ಜಾರ್ಜ್​ ಹಾರ್ಡ್ಲಿ ಕೂಡ 13 ಇನಿಂಗ್ಸ್​ಗಳಲ್ಲೇ 5 ಶತಕ ಸಿಡಿಸಿದ್ದರು. ಇನ್ನು 25 ವರ್ಷದ ಕಮಿಂದು ಟೆಸ್ಟ್​ನಲ್ಲಿ ಅತಿವೇಗವಾಗಿ ಸಾವಿರ ರನ್​ ಪೂರೈಸಿದ ಏಷ್ಯಾದ ಸಾಧಕರೆನಿಸಿದ್ದು, ಒಟ್ಟಾರೆಯಾಗಿ 2ನೇ ಸ್ಥಾನದೊಂದಿಗೆ ಬ್ರಾಡ್ಮನ್​ ಸಾಧನೆ ಸರಿಗಟ್ಟಿದ್ದಾರೆ. ಹರ್ಬೆರ್ಟ್​ ಸಟ್​ಕ್ಲ್​ಿ ಮತ್ತು ಎವರ್ಟನ್​ ವೀಕ್ಸ್​ ತಲಾ 12 ಇನಿಂಗ್ಸ್​ಗಳಲ್ಲೇ ಈ ಸಾಧನೆ ಮಾಡಿರುವುದು ವಿಶ್ವದಾಖಲೆಯಾಗಿದೆ.

ಶ್ರೀಲಂಕಾ: 163.4 ಓವರ್​ಗಳಲ್ಲಿ 5 ವಿಕೆಟ್​ಗೆ 602 ಡಿಕ್ಲೇರ್​ (ಮ್ಯಾಥ್ಯೂಸ್​ 88, ಕಮಿಂದು 182*, ಧನಂಜಯ 44, ಕುಸಲ್​ ಮೆಂಡಿಸ್​ 106*, ಫಿಲಿಪ್ಸ್​ 141ಕ್ಕೆ 3, ಸೌಥಿ 70ಕ್ಕೆ 1), ನ್ಯೂಜಿಲೆಂಡ್​: 14 ಓವರ್​ಗಳಲ್ಲಿ 2 ವಿಕೆಟ್​ಗೆ 22 (ಲಾಥಮ್​ 2, ಕಾನ್​ವೇ 9, ವಿಲಿಯಮ್ಸನ್​ 6*, ಅಶಿತಾ 5ಕ್ಕೆ 1, ಪ್ರಭಾತ್​ 3ಕ್ಕೆ 1).