ಪಲ್ಲೆಕೇಲೆ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಲಂಕಾದ ಬೌಲರ್ ಒಬ್ಬರು ವಿಭಿನ್ನ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಸಾಮಾನ್ಯವಾಗಿ ಯಾವುದೇ ಬೌಲರ್ ಬಲಗೈ ಅಥವಾ ಎಡಗೈನಿಂದ ಬೌಲಿಂಗ್ ಮಾಡುತ್ತಾರೆ. ಆದರೆ, ಈ ಪಂದ್ಯದಲ್ಲಿ ಲಂಕಾ ಸ್ಪಿನ್ನರ್ ಕಮಿಂದು ಮೆಂಡಿಸ್ ತನ್ನ ಎರಡೂ ಕೈಗಳಿಂದ ಬೌಲಿಂಗ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.
ಟೀಮ್ ಇಂಡಿಯಾ ಇನಿಂಗ್ಸ್ನ 10ನೇ ಓವರ್ ಬೌಲ್ ಮಾಡಲು ಬಂದ ಮೆಂಡಿಸ್, ಇಬ್ಬರು ಬ್ಯಾಟರ್ಗಳನ್ನು ಕಂಗೆಡಿಸಿದರು. ಕಮಿಂದು ಮೆಂಡಿಸ್ ಅವರು ಸೂರ್ಯಕುಮಾರ್ ಯಾದವ್ ಅವರಿಗೆ ಎಡಗೈನಲ್ಲಿ ಬೌಲಿಂಗ್ ಮಾಡಿದರೆ, ರಿಷಬ್ ಪಂತ್ ಅವರಿಗೆ ಬಲಗೈನಲ್ಲಿ ಬೌಲಿಂಗ್ ಮಾಡಿದರು.
ಬಲಗೈ ಬ್ಯಾಟ್ಸ್‌ಮನ್‌ಗಳು ಸಾಮಾನ್ಯವಾಗಿ ಎಡಗೈ ಸ್ಪಿನ್ನ ದಾಳಿ ಎದುರಿಸಲು ಎಡವುತ್ತಾರೆ. ಅದೇ ರೀತಿ ಎಡಗೈ ಬ್ಯಾಟ್ಸ್‌ಮನ್‌ಗಳು ಬಲಗೈ ಬೌಲರ್ ದಾಳಿಯಿಂದ ಕಿರಿಕಿರಿಗೆ ಒಳಗಾಗುತ್ತಾರೆ. ಹೀಗಾಗಿಯೇ ಮೆಂಡಿಸ್ ಇಬ್ಬರನ್ನು ಕಾಡಲು ಯತ್ನಿಸಿದರು. ಮೆಂಡಿಸ್ ಅವರ ಬೌಲಿಂಗ್ ದಾಳಿ ನೋಡಿದ ನೆಟ್ಟಿಗರು ಎರಡೂ ಕೈಯಿಂದ ಬೌಲಿಂಗ್ ಮಾಡುವುದು ಸರಿಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ ಇದು ಸರಿಯಾಗಿದೆ.
ನಿಯಮಗಳ ಪ್ರಕಾರ ಬೌಲರ್ ಎರಡೂ ಕೈಯಿಂದ ಬೌಲ್ ಮಾಡಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಚೆಂಡು ಎಸೆಯುವ ಮುನ್ನ ಅಂಪೈರ್‌ಗೆ ಮಾಹಿತಿ ನೀಡಬೇಕು. ಆಗ ಅಂಪೈರ್ ಬ್ಯಾಟರ್‌ಗೆ ಈ ಬಗ್ಗೆ ಹೇಳುತ್ತಾರೆ. ಈ ರೀತಿಯ ಬೌಲಿಂಗ್ ಪ್ರತಿಭೆ ಬಹಳ ಅಪರೂಪ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಇಂಡಿಯಾ ಇನ್ನಿಂಗ್ಸ್ ಮುಗಿದಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದೆ. ತಂಡದ ಪರ ಯಶಸ್ಸಿ ಜೈಸ್ವಾಲ್ (40), ಶುಭಮನ್ ಗಿಲ್ (34), ನಾಯಕ ಸೂರ್ಯಕುಮಾರ್ ಯಾದವ್ (58) ಹಾಗೂ ರಿಷಭ್ ಪಂತ್ (49) ರನ್ ಗಳ ಕಾಣಿಕೆ ನೀಡಿದರು.
ಲಂಕಾ ಪರ ಮತೀಶ ಪತಿರಾಣ 4 ವಿಕೆಟ್ ಪಡೆದು ಮಿಂಚಿದರೆ, ದಿಲ್ಶನ್ ಮಧುಶಂಕ, ಅಸಿತಾ ಫರ್ನಾಂಡೋ ಹಾಗೂ ವಾನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)