ಕ್ರೀಡೆ

ಆತ ಅಷ್ಟು ಪ್ರಭಾವಶಾಲಿಯಾಗಿಲ್ಲ... Virat Kohli ಆರ್​ಸಿಬಿ ನಾಯಕನಾಗಿ ನೇಮಕವಾಗುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಆಟಗಾರ

ಮುಂಬೈ: 18ನೇ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ಈಗಾಗಲೇ ಕೆಲಸಗಳು ಆರಂಭವಾಗಿದ್ದು, ಮುನ್ನುಡಿ ಎಂಬಂತೆ ರಿಟೇನ್​ ಪಟ್ಟಿಯನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ. ಆರ್​ಸಿಬಿ (RCB) ಫ್ರಾಂಚೈಸಿ ಮೂವರು ದೇಶಿ ಆಟಗಾರರಿಗೆ ಮಣೆ ಹಾಕುವ ಮೂಲಕ ಎಲ್ಲರ ಹುಬ್ಬೇರಿಸಿದ್ದು, ಮೆಗಾ ಹರಾಜಿನಲ್ಲಿ ಮೂರು ಆರ್​ಟಿಎಮ್​ (RTM) ಬಳಸಲು ತಯಾರಿ ನಡೆಸಿದೆ. ಇನ್ನೂ 2025ರಲ್ಲಿ ಆರ್​ಸಿಬಿಯನ್ನು ವಿರಾಟ್ ಕೊಹ್ಲಿ (Virat Kohli) ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಫ್ರಾಂಚೈಸಿ ನೀಡಿರುವ ಹೇಳಿಕೆ ಕೂಡ ಪುಷ್ಠಿ ನೀಡಿದೆ. ಆದರೆ, ಈ ಬಗ್ಗೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರರೊಬ್ಬರು ಅಪಸ್ವರ ತೆಗೆದಿದ್ದು, ಯಾವ ಕೊಹ್ಲಿಯನ್ನು ಯಾವ ಆಧಾರದ ಮೇಲೆ ನಾಯಕನನ್ನಾಗಿ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

2013-2021ರವರೆಗೆ ಆರ್​ಸಿಬಿ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ ವಿರಾಟ್​ (Virat Kohli) ತಂಡವನ್ನು 2015, 2016, 2020, 2021ರಲ್ಲಿ ಪ್ಲೇಆಫ್​ಗೇರಿಸುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ತಂಡ ಫಿನಾಲೆ ಕೂಡ ಪ್ರವೇಶಿಸಿತ್ತು. 2022ರಲ್ಲಿ ವಿರಾಟ್ (Virat Kohli)​ ನಾಯಕತ್ವವನ್ನು ತ್ಯಜಿಸಿದ ಕಾರಣ ಫಾಫ್​ ಡು ಪ್ಲೆಸಿಸ್​ (Faf Du Plesis) ಅವರನ್ನು ತಂಡ ನೂತನ ಕ್ಯಾಪ್ಟನ್​ ಆಗಿ ನೇಮಿಸಿತ್ತು. ಫಾಫ್​ ನಾಯಕತ್ವದ ಅವಧಿಯಲ್ಲಿ ತಂಡ 2022 ಹಾಗೂ 2024ರಲ್ಲಿ ಪ್ಲೇಆಫ್​ ಪ್ರವೇಶಿಸಿದೆ. ಇದೀಗ ವಿರಾಟ್​ (Virat Kohli) ಮತ್ತೊಮ್ಮೆ ಆರ್​ಸಿಬಿ (RCB) ನಾಯಕರಾಗಲಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್​ ಮಾಂಜ್ರೇಕರ್​ (Sanjay Manjrekar) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂಜಯ್ (Sanjay Manjrekar)​, ಅಭಿಮಾನಿಗಳಿಗೆ ನನ್ನ ಕಡೆಯಿಂದ ಒಂದು ಪ್ರಶ್ನೆಯಿದೆ. ಮೊದಲು ನಿಮ್ಮ ಮನಸ್ಸಿನಿಂದ ವಿರಾಟ್​ ಕೊಹ್ಲಿಯನ್ನು (Virat Kohli) ತೆಗೆದು ಹಾಕಿ. ವಿರಾಟ್​ ಬದಲು ಆ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ನೀವು ಇದೇ ರೀತಿ ಬೆಂಬಲಿಸುತ್ತಿದ್ರಾ. ಅವರ ಬ್ಯಾಟಿಂಗ್ ಮತ್ತು ನಾಯಕತ್ವದ ಪ್ರದರ್ಶನವನ್ನು ನೋಡಿ. ನಂತರ ನೀವು ಯೋಚಿಸುತ್ತೀರಾ. ಆ ನಂತರ ನೀವು ಒಮ್ಮೆ ಯೋಚನೆ ಮಾಡಿ ಆತನನ್ನು ನಾಯಕನನ್ನಾಗಿ ಮಾಡುವುದಾ ಬೇಡವಾ ಎಂಬುದು ನಿಮಗೆ ತಿಳಿಯಲಿದೆ. 

ವಿರಾಟ್ ಕೊಹ್ಲಿ (Virat Kohli) ಎಂಬ ಕಾರಣಕ್ಕೆ, 95 ಪ್ರತಿಶತ ಅಭಿಮಾನಿಗಳು ಅವರು ನಾಯಕರಾಗಬೇಕೆಂದು ಬಯಸುತ್ತಾರೆ. ಆದರೆ ನೀವು ಅವರ ಪ್ರದರ್ಶನವನ್ನು ನೋಡಿದರೆ, ಅದು ಅಷ್ಟು ಪ್ರಭಾವಶಾಲಿಯಾಗಿಲ್ಲ ಎಂದು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್​ ಮಾಂಜ್ರೇಕರ್ ವಿರಾಟ್​ ಕೊಹ್ಲಿಯನ್ನು ಆರ್​ಸಿಬಿ ನಾಯಕನನ್ನಾಗಿ ಮಾಡುವ ಬಗ್ಗೆ ​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.