ನವದೆಹಲಿ: ಭಾರತದ ಯುವ ಆರಂಭಿಕ ಶುಭಮಾನ್ ಗಿಲ್ ಡೆಂಘೆ ಜ್ವರದಿಂದ ಬಳಲುತ್ತಿರುವ ಕಾರಣ ಏಕದಿನ ವಿಶ್ವಕಪ್ನ ಆರಂಭಿಕ 2 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು, ಇನ್ನೂ 2 ಪಂದ್ಯದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಇದರಿಂದಾಗಿ ಅವರು ವಿಶ್ವಕಪ್ಗೆ ಪದಾರ್ಪಣೆ ಮಾತ್ರವಲ್ಲದೆ, ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.
ಸದ್ಯ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವಿಶ್ವಕಪ್ನ ಮೊದಲ 2 ಪಂದ್ಯಗಳಲ್ಲಿ ಒಟ್ಟು 15 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಗಿಲ್ ಆಡಿದ್ದರೆ ನಿಶ್ಚಿತವಾಗಿ ನಂ. 1 ಪಟ್ಟಕ್ಕೇರುವ ಅವಕಾಶವಿತ್ತು. ವಿಶ್ವಕಪ್ಗೆ ಮುನ್ನ ಇವರಿಬ್ಬರ ನಡುವೆ ಕೇವಲ 10 ಅಂಕಗಳ ಅಂತರವಿದ್ದರೆ, ಈಗ ಅದು 5ಕ್ಕೆ ಇಳಿದಿದೆ. ಬುಧವಾರದ ಪರಿಷತ ರ್ಯಾಂಕಿಂಗ್ ಪ್ರಕಾರ ಬಾಬರ್ 835 ಮತ್ತು ಗಿಲ್ 830 ಅಂಕ ಹೊಂದಿದ್ದಾರೆ.
ಈ ನಡುವೆ ಆಸೀಸ್ ವಿರುದ್ಧ ಮೊದಲ ಪಂದ್ಯದಲ್ಲಿ ಮಿಂಚಿದ ವಿರಾಟ್ ಕೊಹ್ಲಿ 1 ಸ್ಥಾನ ಬಡ್ತಿ ಪಡೆದು 7ನೇ ಸ್ಥಾನಕ್ಕೇರಿದ್ದರೆ, ಕನ್ನಡಿಗ ಕೆಎಲ್ ರಾಹುಲ್ 19ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ನಲ್ಲಿ ವೇಗಿ ಮೊಹಮದ್ ಸಿರಾಜ್ ಸದ್ಯ 2ನೇ ಸ್ಥಾನಕ್ಕಿಳಿದಿದ್ದಾರೆ.
ಗಿಲ್ ತಂಡ ಸೇರಲು ರೆಡಿ
ಟೀಮ್ ಇಂಡಿಯಾ ಜತೆಗೆ ಚೆನ್ನೈನಿಂದ ನವದೆಹಲಿಗೆ ತೆರಳದ ಶುಭಮಾನ್ ಗಿಲ್ ಇದೀಗ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮುನ್ನ ಅಹಮದಾಬಾದ್ನಲ್ಲಿ ತಂಡವನ್ನು ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಇನ್ನೂ ಅನುಮಾನಗಳಿವೆ. ಅಲ್ಲದೆ ಬಿಸಿಸಿಐ ವೈದ್ಯಕಿಯ ತಂಡದ ನಿಗಾದಲ್ಲೇ ಇರಲಿದ್ದಾರೆ ಎನ್ನಲಾಗಿದೆ.