ಕ್ರೀಡೆ

ಜೂನಿಯರ್​ ಪುರುಷರ ಹಾಕಿ ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರಿದ ಭಾರತ

ಕೌಲಾಲಂಪುರ: ಭಾರತ ತಂಡ ಜೂನಿಯರ್​ ಪುರುಷರ ಹಾಕಿ ವಿಶ್ವಕಪ್​ನಲ್ಲಿ ಸತತ 3ನೇ ಬಾರಿ ಸೆಮಿಫೈನಲ್​ಗೇರಿದ ಸಾಧನೆ ಮಾಡಿದೆ. ಎರಡು ಬಾರಿಯ ಚಾಂಪಿಯನ್​ ಭಾರತ ತಂಡ ಮಂಗಳವಾರ ನಡೆದ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ನೆದರ್ಲೆಂಡ್​ ಎದುರು 4-3 ಗೋಲುಗಳಿಂದ ರೋಚಕ ಗೆಲುವು ದಾಖಲಿಸಿತು. ಗುರುವಾರ ನಡೆಯಲಿರುವ ಉಪಾಂತ್ಯ ಹೋರಾಟದಲ್ಲಿ ಭಾರತ ತಂಡ 6 ಬಾರಿಯ ಚಾಂಪಿಯನ್​ ಜರ್ಮನಿ ಎದುರು ಸೆಣಸಲಿದೆ.

ಪಂದ್ಯದ ಮೊದಲಾರ್ಧದಲ್ಲಿ 0-2 ಹಿನ್ನಡೆಯಲ್ಲಿದ್ದ ಭಾರತ ತಂಡ ಬಳಿಕ ಸಮಬಲ ಸಾಧಿಸಿದರೂ, ಪಂದ್ಯ ಮುಕ್ತಾಯಕ್ಕೆ 8 ನಿಮಿಷಗಳಿರುವವರೆಗೂ 3-2ರಿಂದ ಹಿಂದಿತ್ತು. ಆದರೆ, 52ನೇ ನಿಮಿಷದಲ್ಲಿ ಭಾರತ ಮತ್ತೆ ಸಮಬಲ ಸಾಧಿಸಿತು. 57ನೇ ನಿಮಿಷದಲ್ಲಿ ನಾಯಕ ಉತ್ತಮ್​ ಸಿಂಗ್​ ಭಾರತ ತಂಡಕ್ಕೆ ಗೆಲುವಿನ ಗೋಲು ತಂದುಕೊಟ್ಟರು.

ಜರ್ಮನಿ ಪರ ಟಿಮೋ ಬೋರ್ಸ್​ (5ನೇ ನಿಮಿಷ) ಮತ್ತು ಪೆಪಿಜ್​ ವಾನ್​ ಡರ್​ ಹೈಜ್ಡೆನ್​ (16) ಮೊದಲೆರಡು ಗೋಲು ಬಾರಿಸಿದರು. ಮೊದಲಾರ್ಧದಲ್ಲಿ ಭಾರತದ ರಕ್ಷಣಾ ವಿಭಾಗ ಉತ್ತಮ ನಿರ್ವಹಣೆಯ ನಡುವೆ ಇದೆರಡು ಎಡವಟ್ಟುಗಳಿಂದ ಹಿನ್ನಡೆ ಕಾಣುವಂತೆ ಮಾಡಿತು. ಬಳಿಕ 3ನೇ ಕ್ವಾರ್ಟರ್​ನ ಆರಂಭದಲ್ಲೇ ಆದಿತ್ಯ ಲಲಗೆ (34) ಮತ್ತು ಅರೈಜೀತ್​ ಸಿಂಗ್​ ಹಂಡಲ್​ (35) ಒಂದು ನಿಮಿಷದ ಅಂತರದಲ್ಲಿ 2 ಗೋಲು ಬಾರಿಸಿ ಸಮಬಲ ತಂದರು. 44ನೇ ನಿಮಿಷದಲ್ಲಿ ಒಲಿವರ್​ ಹೊರ್ಟೆನ್​ಸಿಯುಸ್​ (44) ಡಚ್ಚರಿಗೆ ಮತ್ತೆ ಮುನ್ನಡೆ ಒದಗಿಸಿದರು. ನಂತರ ಆಕ್ರಮಣ ಹೆಚ್ಚಿಸಿದ ಭಾರತಕ್ಕೆ ಸೌರಭ್​ ಆನಂದ್​ ಕುಶ್​ವಾಹ್​ (52) ಮತ್ತೆ ಸಮಬಲ ತಂದುಕೊಟ್ಟರು. ಬಳಿಕ ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳಿರುವಾಗ ಉತ್ತಮ್​ ಸಿಂಗ್​ ಮತ್ತೊಂದು ಪೆನಾಲ್ಟಿ ಕಾರ್ನರ್​ಅನ್ನು ಗೋಲಾಗಿ ಪರಿವರ್ತಿಸಿ ಜಯಭೇರಿ ಮೊಳಗಿಸಿದರು.

ಭಾರತದ ಗೆಲುವಿನಲ್ಲಿ ರೋಹಿತ್​ ಸಾರಥ್ಯದ ರಕ್ಷಣಾ ವಿಭಾಗ ಮತ್ತು ಗೋಲು ಕೀಪರ್​ ಹಾಗೂ ಕನ್ನಡಿಗ ಮೋಹಿತ್​ ಎಚ್​ಎಸ್​ ನಿರ್ವಹಣೆಯೂ ಪ್ರಮುಖ ಪಾತ್ರ ವಹಿಸಿತು. ಕೊನೇ ಕ್ವಾರ್ಟರ್​ನಲ್ಲಿ ಭಾರತದ ರಕ್ಷಣಾ ಪಡೆ ಡಚ್ಚರ ಸತತ 6 ಪೆನಾಲ್ಟಿ ಕಾರ್ನರ್​ಗಳು ಗೋಲಾಗದಂತೆ ತಡೆಯೊಡ್ಡಿತು. ಈ ಪ್ರಯತ್ನಕ್ಕಾಗಿ ರೋಹಿತ್​ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. 2021ರ ಕಳೆದ ಆವೃತ್ತಿಯ ಸೆಮಿಫೈನಲ್​ನಲ್ಲಿ ಜರ್ಮನಿ ಎದುರು ಸೋತಿದ್ದ ಭಾರತ ತಂಡ ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶ ಹೊಂದಿದೆ.