ಕ್ರೀಡೆ

ಇಂದಿನಿಂದ ಕಿರಿಯರ ವಿಶ್ವಕಪ್​: 16 ಮಹಿಳಾ ತಂಡಗಳ ಟಿ20 ಹಣಾಹಣಿ; ಹಾಲಿ ಚಾಂಪಿಯನ್​ ಭಾರತ ನಾಳೆ ಕಣಕ್ಕೆ

ಕೌಲಾಲಂಪುರ: ಭವಿಷ್ಯದ ಕ್ರಿಕೆಟ್​ ತಾರೆಯರ ಹಣಾಹಣಿ ಎನಿಸಿರುವ 19 ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್​ 2ನೇ ಆವೃತ್ತಿಗೆ ಶನಿವಾರ ಚಾಲನೆ ಸಿಗಲಿದೆ. ಆಸ್ಟ್ರೆಲಿಯಾ ಮತ್ತು ಸ್ಕಾಟ್ಲೆಂಡ್​ ನಡುವೆ ಉದ್ಘಾಟನಾ ಪಂದ್ಯ ನಿಗದಿಯಾಗಿದ್ದು, ಮೊದಲ ದಿನ ಒಟ್ಟು 6 ಪಂದ್ಯಗಳು ನಡೆಯಲಿವೆ. ಒಟ್ಟು 16 ತಂಡಗಳ ಟೂರ್ನಿಯಲ್ಲಿ ಭಾರತ ತಂಡ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದೆ. ಕನ್ನಡತಿ ನಿಕಿ ಪ್ರಸಾದ್​ ಸಾರಥ್ಯದ ಭಾರತ ತಂಡ ಭಾನುವಾರ ವೆಸ್ಟ್​ ಇಂಡೀಸ್​ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. 2023ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ಶೆಾಲಿ ವರ್ಮ ಸಾರಥ್ಯದಲ್ಲಿ ಪ್ರಶಸ್ತಿ ಜಯಿಸಿತ್ತು.

ಭಾರತ ತಂಡ ಎ ಗುಂಪಿನಲ್ಲಿ ವೆಸ್ಟ್​ ಇಂಡೀಸ್​, ಶ್ರೀಲಂಕಾ ಮತ್ತು ಆತಿಥೇಯ ಮಲೇಷ್ಯಾ ಜತೆಗೆ ಸ್ಥಾನ ಪಡೆದಿದೆ. ಮೊದಲ ದಿನ ಇಂಗ್ಲೆಂಡ್​&ಐರ್ಲೆಂಡ್​, ನೈಜೀರಿಯಾ&ಸಮೋವಾ, ಬಾಂಗ್ಲಾದೇಶ&ನೇಪಾಳ, ಪಾಕಿಸ್ತಾನ&ಅಮೆರಿಕ, ನ್ಯೂಜಿಲೆಂಡ್​&ದಣ ಆಫ್ರಿಕಾ ನಡುವೆ ಇತರ ಪಂದ್ಯಗಳು ನಡೆಯಲಿವೆ.

ಭಾರತ ತಂಡ ಈ ಬಾರಿ ಹೈದರಾಬಾದ್​ ಬ್ಯಾಟರ್​ ಜಿ. ತ್ರಿಷಾ, ಎಡಗೈ ಸ್ಪಿನ್ನರ್​ ಪುರಾಣಿಕಾ ಸಿಸೋಡಿಯಾ, ಸೋನಮ್​ ಯಾದವ್​, ಆಯುಷಿ ಶುಕ್ಲಾ ಮುಂತಾದ ಪ್ರತಿಭಾನ್ವಿತ ಆಟಗಾರ್ತಿಯರನ್ನು ಒಳಗೊಂಡಿದೆ. ನಾಯಕಿ ನಿಕಿ ಜತೆಗೆ ಮಿಥಿಲಾ ವಿನೋದ್​ ತಂಡದಲ್ಲಿರುವ ಇನ್ನೋರ್ವ ಕನ್ನಡತಿಯಾಗಿದ್ದಾರೆ. ಭಾರತ ಈ ಸಲವೂ ಫೇವರಿಟ್​ ತಂಡವಾಗಿದ್ದರೂ, ಇಂಗ್ಲೆಂಡ್​, ಆಸ್ಟ್ರೆಲಿಯಾ ಮತ್ತು ದ. ಆಫ್ರಿಕಾದಿಂದ ನಿಕಟ ಪೈಪೋಟಿ ಎದುರಾಗುವ ನಿರೀೆ ಇದೆ. ಸಮೋವಾ, ನೈಜೀರಿಯಾ, ನೇಪಾಳ ಮತ್ತು ಮಲೇಷ್ಯಾ ಮೊದಲ ಬಾರಿ ಟೂರ್ನಿ ಆಡುತ್ತಿರುವ ತಂಡಗಳಾಗಿವೆ.

ಗುಂಪುಗಳು

ಎ: ಭಾರತ, ವೆಸ್ಟ್​ ಇಂಡೀಸ್​, ಶ್ರೀಲಂಕಾ, ಮಲೇಷ್ಯಾ.

ಬಿ: ಇಂಗ್ಲೆಂಡ್​, ಪಾಕಿಸ್ತಾನ, ಐರ್ಲೆಂಡ್​, ಅಮೆರಿಕ.

ಸಿ: ನ್ಯೂಜಿಲೆಂಡ್​, ದ. ಆಫ್ರಿಕಾ, ನೈಜೀರಿಯಾ, ಸಮೋವಾ.

ಡಿ: ಆಸ್ಟ್ರೆಲಿಯಾ, ಬಾಂಗ್ಲಾದೇಶ, ನೇಪಾಳ, ಸ್ಕಾಟ್ಲೆಂಡ್​.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 3 ತಂಡಗಳು ಸೂಪರ್​&6 ಹಂತಕ್ಕೇರಲಿವೆ. ಅಲ್ಲೂ 2 ಗುಂಪುಗಳಲ್ಲಿ ತಲಾ 6 ತಂಡಗಳಿರುತ್ತವೆ. ಲೀಗ್​ ಹಂತದ ಎ-ಡಿ ಗುಂಪಿನ ತಂಡಗಳು ಸೂಪರ್​-6ರಲ್ಲಿ 1ನೇ ಗುಂಪಿನಲ್ಲಿದ್ದರೆ, ಬಿ-ಸಿ ಗುಂಪಿನ ತಂಡಗಳು 2ನೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. ತನ್ನ ಲೀಗ್​ ಗುಂಪಿನ ತಂಡದ ವಿರುದ್ಧ ಗೆದ್ದ ಅಂಕ-ರನ್​ರೇಟ್​ಅನ್ನು ಸೂಪರ್-6ಗೂ ತೆಗೆದುಕೊಂಡು ಹೋಗಲಿದೆ. ಇನ್ನೊಂದು ಗುಂಪಿನ ತಂಡದ ವಿರುದ್ಧ ಮಾತ್ರ ಸೂಪರ್​&6ರಲ್ಲಿ ಆಡಲಿದ್ದು, ನಂತರ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಜ.24ರಿಂದ 29ರವರೆಗೆ ಸೂಪರ್-6 ಪಂದ್ಯಗಳು ನಡೆದರೆ, ಜ.31ಕ್ಕೆ ಸೆಮಿಫೈನಲ್ಸ್​ ಮತ್ತು ಫೆ. 2ಕ್ಕೆ ಫೈನಲ್​ ನಡೆಯಲಿದೆ.

ಭಾರತದ ಲೀಗ್​ ಪಂದ್ಯಗಳು

ದಿನಾಂಕ ಎದುರಾಳಿ

ಜ.19 ವೆಸ್ಟ್​ ಇಂಡೀಸ್​

ಜ.21 ಮಲೇಷ್ಯಾ

ಜ. 23 ಶ್ರೀಲಂಕಾ

ಆರಂಭ: ಮಧ್ಯಾಹ್ನ 12.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​