ಬೆಂಗಳೂರು: ಮಾರ್ಚ್ 22ರಂದು ಪ್ರಾರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL) ಈಗಘಾಲೇ ಸಿದ್ಧತೆಗಳು ಭರದಿಂದ ಸಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿವೆ.
ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಕೆಲ ಸ್ಟಾರ್ ಆಟಗಾರರು ಗಾಯದ ಸಮಸ್ಯೆ, ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇವರ ಜಾಗಕ್ಕೆ ಬದಲಿ ಆಟಗಾರರು ಪ್ರವೇಶಿಸುತ್ತಿದ್ದಾರೆ. ಈ ಸಮಸ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ತಲೆದೂರಿದೆ.
ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ಪಾಲಾಗಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಟಾಮ್ ಕರ್ರನ್ ಗಾಯಗೊಂಡಿದ್ದು, ತಂಡಕ್ಕೆ ಇವರ ಲಭ್ಯತೆ ಬಗ್ಗೆ ಗೊಂದಲವಿದೆ. ಇದರ ಬೆನ್ನಲ್ಲೇ ಬದಲಿ ಆಟಗಾರನ ಹುಡುಕಾಟದಲ್ಲಿ ನಿರತವಾಗಿರುವ ಆರ್ಸಿಬಿ ಮಾರಕ ವೇಗಿಯನ್ನು ಕರೆತರಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಆದರೆ ಇದೀಗ ಆರ್ಸಿಬಿ ಪ್ರಾಂಚೈಸಿ ತಂಡಕ್ಕೆ ಘಾತುಕ ವೇಗಿಯನ್ನು ಕರೆತಯರಲು ದೊಡ್ಡ ಸ್ಕೆಚ್ ಹಾಕಿದೆ. ಹೌದು, ಕೆಲ ವರದಿಗಳ ಪ್ರಕಾರ ಆರ್ಸಿಬಿ ತಂಡಕ್ಕೆ ಇಂಗ್ಲೆಂಡ್ ವೇಗದ ಬೌಲರ್ ಜೋಪ್ರಾ ಆರ್ಚರ್ ಬರುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರವೆಂಬಂತೆ ಆರ್ಚರ್ ಸಹ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಆರ್ಚರ್ ಪ್ರಸ್ತುತ ತನ್ನ ಕೌಂಟಿ ಕ್ಲಬ್ ಸಸೆಕ್ಸ್‌ನೊಂದಿಗೆ ಭಾರತ ಪ್ರವಾಸ ಮಾಡುತ್ತಿದ್ದಾರೆ. ಸಸೆಕ್ಸ್ ತಂಡ ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. ಸದ್ಯ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಹೀಗಿರುವಾಗ ಈ ಋತುವಿನಲ್ಲಿ ಆಡಲು ಆರ್ಚರ್ ಅವರನ್ನು ಆರ್ಸಿಬಿ ಸಂಪರ್ಕಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.