ಕ್ರೀಡೆ

4ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ಶತಕದ 'ರೂಟ್'​​! ಇಂಗ್ಲೆಂಡ್​ ಬ್ಯಾಟರ್​ ಹೆಸರಿನಲ್ಲಿ ದಾಖಲೆಗಳ ಸರಮಾಲೆ | Joe Root

Joe Root: ಇಂದು (ಜು.25) ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್‌ನ ಸ್ಟಾರ್​ ಆಟಗಾರ ಜೋ ರೂಟ್ ಶತಕ ಬಾರಿಸಿದ್ದಾರೆ. ಈ ಮೂಲಕ ದಿಗ್ಗಜ ಆಟಗಾರರ ದಾಖಲೆಗಳನ್ನು ಉಡೀಸ್ ಮಾಡುತ್ತಿದ್ದಾರೆ.

ಟೀಮ್ ಇಂಡಿಯಾ ವೇಗಿ ಅನ್ಶುಲ್ ಕಾಂಬೋಜ್​ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ರೂಟ್​ ಶತಕದಾಟ ಪ್ರದರ್ಶಿಸಿದರು. 178 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ಸೆಂಚುರಿ ದಾಖಲಿಸಿದ್ದಾರೆ. ಟೆಸ್ಟ್‌ನಲ್ಲಿ ಇದು ಅವರ 38ನೇ ಶತಕವಾಗಿದ್ದು, ಟೆಸ್ಟ್‌ನಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೂಟ್​, ಶ್ರೀಲಂಕಾದ ಮಾಜಿ ಕ್ಯಾಪ್ಟನ್​ ಕುಮಾರ್ ಸಂಗಕ್ಕಾರ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.

ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಟೀಮ್ ಇಂಡಿಯಾ ದಿಗ್ಗಜ, ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. 200 ಟೆಸ್ಟ್‌ಗಳಲ್ಲಿ 51 ಶತಕಗಳನ್ನು ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಸಚಿನ್​ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರದಲ್ಲಿ, ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟರ್​ ಜ್ಯಾಕ್​ ಕಾಲಿಸ್ 45 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ 41 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರಿವರು

1. ಸಚಿನ್ ತೆಂಡೂಲ್ಕರ್ (ಭಾರತ) – 200 ಪಂದ್ಯಗಳಲ್ಲಿ 51 ಶತಕ

2. ಜ್ಯಾಕ್​ ಕಾಲಿಸ್ (ದಕ್ಷಿಣ ಆಫ್ರಿಕಾ) – 166 ಪಂದ್ಯಗಳಲ್ಲಿ 45 ಶತಕ

3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 168 ಪಂದ್ಯಗಳಲ್ಲಿ 41 ಶತಕ

4. ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 134 ಪಂದ್ಯಗಳಲ್ಲಿ 38 ಶತಕ

5. ಜೋ ರೂಟ್ (ಇಂಗ್ಲೆಂಡ್) – 157 ಪಂದ್ಯಗಳಲ್ಲಿ 38 ಶತಕಗಳು

ಭಾರತದ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್​

ಇಂದಿನ ಶತಕದೊಂದಿಗೆ, ಜೋ ರೂಟ್ ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ದಾಖಲಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್​ರನ್ನು ಮೀರಿಸಿರುವ ಜೋ ರೂಟ್​, 12ನೇ ಶತಕದ ಮುಖೇನ ಸ್ಮಿತ್​ರ 11 ಶತಕಗಳನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ದಾಖಲಿಸಿದ ಆಟಗಾರಿರವರು

1. ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) - ಇಂಗ್ಲೆಂಡ್ ವಿರುದ್ಧ 19 ಶತಕ

2. ಸುನಿಲ್ ಗವಾಸ್ಕರ್ (ಭಾರತ) - ವೆಸ್ಟ್ ಇಂಡೀಸ್ ವಿರುದ್ಧ 13 ಶತಕ

3. ಜ್ಯಾಕ್ ಹಾಬ್ಸ್ (ಇಂಗ್ಲೆಂಡ್) - ಆಸ್ಟ್ರೇಲಿಯಾ ವಿರುದ್ಧ 12 ಶತಕ

4. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - ಇಂಗ್ಲೆಂಡ್ ವಿರುದ್ಧ 12 ಶತಕ

5. ಜೋ ರೂಟ್ (ಇಂಗ್ಲೆಂಡ್) - ಭಾರತದ ವಿರುದ್ಧ 12 ಶತಕ