ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ 7 ನಂಬರ್ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸಿದೆ. ಈ ಹಿಂದೆ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ 10 ನಂಬರ್ ಜೆರ್ಸಿಯನ್ನೂ ನಿವೃತ್ತಿಗೊಳಿಸಲಾಗಿತ್ತು. ಆದರೆ, ಕ್ರೀಡೆಯಲ್ಲಿ ಅಥವಾ ಕ್ರಿಕೆಟ್ನಲ್ಲಿ ಆಟಗಾರರ ಜೆರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸುವುದು ಹೊಸದೇನಲ್ಲ!
ಬಾಸ್ಕೆಟ್ಬಾಲ್, ಐಸ್ ಹಾಕಿ, ರಗ್ಬಿ, ಅಮೆರಿಕನ್ ಫುಟ್ಬಾಲ್, ಆಸ್ಟ್ರೆಲಿಯನ್ ಫುಟ್ಬಾಲ್, ಮೋಟಾರ್ಸ್ಪೋರ್ಟ್ಸ್ಗಳಲ್ಲಿ ದಿಗ್ಗಜ ಕ್ರೀಡಾಪಟುಗಳ ಜೆರ್ಸಿಯನ್ನು ನಿವೃತ್ತಿಗೊಳಿಸಿ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸುವ ಪರಿಪಾಠಗಳಿವೆ.
ಬಾಸ್ಕೆಟ್ಬಾಲ್ ದಿಗ್ಗಜ ಮೈಕೆಲ್ ಜೊರ್ಡನ್ ಅವರ 23 ನಂಬರ್ ಜೆರ್ಸಿಯನ್ನು ಅಮೆರಿಕದ ಚಿಕಾಗೋ ಬುಲ್ಸ್ ನಿವೃತ್ತಿಗೊಳಿಸಿದೆ. ಐಸ್ ಹಾಕಿಯಲ್ಲಿ ಏಸ್ ಬೈಲಿ ಅವರ 6 ನಂಬರ್ ಜೆರ್ಸಿಯನ್ನು ಟೊರಾಂಟೊ ತಂಡ 1934ರಲ್ಲೇ ನಿವೃತ್ತಿಗೊಳಿಸಲಾಗಿತ್ತು. ಕ್ರಿಕೆಟ್ನಲ್ಲಿ ಆಸ್ಟ್ರೆಲಿಯಾ ತಂಡ ಬೌನ್ಸರ್ ಏಟಿಗೆ ಸಾವು ಕಂಡ ಫಿಲ್ ಹ್ಯೂಸ್ ಅವರ 64 ನಂಬರ್ ಜೆರ್ಸಿಯನ್ನು ನಿವೃತ್ತಿಗೊಳಿಸಿದೆ.