ಚೆನ್ನೈ: ನಟಿ ಕಸ್ತೂರಿ ಶಂಕರ್ ( Kasthuri Shankar ) ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ, ಸಿನಿಮಾ ಹಾಗೂ ಕ್ರೀಡೆ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಇದೀಗ ಭಾರತದ ಮಹಿಳಾ ಕ್ರಿಕೆಟರ್ ಜೆಮಿಮಾ ರೊಡ್ರಿಗಸ್ ಬಗ್ಗೆ ಕಸ್ತೂರಿ ಮಾಡಿರುವ ಕಾಮೆಂಟ್ ಭಾರಿ ಚರ್ಚೆಯಾಗುತ್ತಿದೆ.
ನಿಮಗೆಲ್ಲ ಗೊತ್ತಿದೆ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್-2025ರ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ವೀರೋಚಿತ ಹೋರಾಟದೊಂದಿಗೆ ಸೋಲಿಸಿತು. ಬೃಹತ್ ಗುರಿ ಮತ್ತು ಹೆಡ್-ಟು-ಹೆಡ್ ದಾಖಲೆಗಳ ಒತ್ತಡದ ಹೊರತಾಗಿಯೂ, ತವರಿನಲ್ಲಿ (ನವಿ ಮುಂಬೈ) ಪ್ರೇಕ್ಷಕರ ಬೆಂಬಲದೊಂದಿಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ರೊಡ್ರಿಗಸ್ ನೀಡಿದರು. ಅನಿರೀಕ್ಷಿತವಾಗಿ ಒನ್ ಡೌನ್ನಲ್ಲಿ ಬ್ಯಾಟಿಂಗ್ ಮಾಡಬೇಕಾಗಿ ಬಂದರೂ, ಆತ್ಮವಿಶ್ವಾಸದಿಂದಲೇ ಕ್ರೀಸ್ಗೆ ಪ್ರವೇಶಿಸಿ ಅಜೇಯ ಶತಕ ಗಳಿಸಿದರು. 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಫೈನಲ್ ಪ್ರವೇಶವನ್ನು ಖಚಿತಪಡಿಸುವ ಮೂಲಕ ಪಂದ್ಯದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.
ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೊಡ್ರಿಗಸ್ ಪಂದ್ಯದ ಬಳಿಕ ತುಂಬಾ ಭಾವುಕರಾಗಿ ಕಣ್ಣೀರು ಕೂಡ ಹಾಕಿದರು. ಅಲ್ಲದೆ, ಮಾತನಾಡುವಾಗ ಜೀಸಸ್ ಬಗ್ಗೆ ಅವರಾಡಿದ ಮಾತುಗಳನ್ನು ಬಿಜೆಪಿ ನಾಯಕಿ ಮತ್ತು ನಟಿ ಕಸ್ತೂರಿ ಶಂಕರ್ ಟೀಕಿಸಿದ್ದಾರೆ.
ಪಂದ್ಯದ ಆಟಗಾರ್ತಿ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಜೆಮಿಮಾ ರೊಡ್ರಿಗಸ್, ನಾನು ಯೇಸುವಿಗೆ ಧನ್ಯವಾದ ಹೇಳುತ್ತೇನೆ. ಯೇಸುವಿನ ಬೆಂಬಲವಿಲ್ಲದಿದ್ದರೆ, ಇದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಪಂದ್ಯದ ಕೊನೆಯ ಕ್ಷಣಗಳಲ್ಲಿ, ನೀವು ದೃಢವಾಗಿ ನಿಂತರೆ, ದೇವರೇ ನಿಮಗಾಗಿ ಹೋರಾಡುತ್ತಾನೆ ಎಂಬ ಸಾಲುಗಳನ್ನು ನಾನು ಬೈಬಲ್‌ನಲ್ಲಿ ಮತ್ತೆ ಮತ್ತೆ ಓದಿದೆ. ನಾನಿಲ್ಲಿ ಸ್ವಂತವಾಗಿ ಏನನ್ನೂ ಮಾಡದ ಕಾರಣ ನಾನು ಗೆದ್ದೆ ಎಂದು ಹೇಳುವುದಿಲ್ಲ. ಏಕೆಂದರೆ, ಈ ಪಂದ್ಯಾವಳಿಯ ಉದ್ದಕ್ಕೂ ನಾನು ತುಂಬಾ ಮಾನಸಿಕ ನೋವನ್ನು ಅನುಭವಿಸಿದ್ದೇನೆ. ನಾನು ಬಹುತೇಕ ಪ್ರತಿದಿನ ಅಳುತ್ತಿದ್ದೆ. ಆದರೆ, ದೇವರು ಎಲ್ಲವನ್ನೂ ನೋಡಿಕೊಂಡನು ಎಂದು ರೊಡ್ರಿಗಸ್ ಭಾವುಕರಾದರು.
ಜೆಮಿಮಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಸ್ತೂರಿ ಶಂಕರ್ ಅವರು ಟೀಕೆ ಮಾಡಿದ್ದಾರೆ. ದೇವರು ಜೆಮಿಮಾಳನ್ನು ಆಶೀರ್ವದಿಸಲಿ. ಆದರೆ, ಅವಳು ಜೈ ಶ್ರೀ ರಾಮ್, ಹರ ಹರ ಮಹಾದೇವ್ ಅಥವಾ ಸತ್ ಶ್ರೀ ಅಕಾಲ್ ಎಂದು ಹೇಳಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ನನಗೆ ಆಶ್ಚರ್ಯವಾಗುತ್ತದೆ. ಯಾರಾದರೂ ಹಾಗೆ ಮಾಡಿದ್ದಾರೆಯೇ? ಎಂದು ಕಸ್ತೂರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಸ್ತೂರಿ ಅವರ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ನಾನಿದ್ದನ್ನು ನಿಮ್ಮಿಂದ ಎಂದಿಗೂ ನಿರೀಕ್ಷಿಸಿರಲಿಲ್ಲ. ಬಹುಶಃ ನೀವು ಒಂದು ಪಕ್ಷದ ಹಿಡಿತದಲ್ಲಿ ಸಿಲುಕಿಕೊಂಡಿರಬಹುದು. ಆಕೆ "ಹಲ್ಲೆಲುಜಾ" ಎಂದು ಹೇಳಿರಲಿಲ್ಲ. ನ್ಯಾಯವಾಗಿ ಹೇಳಬೇಕೆಂದರೆ ಶ್ರೀ ರಾಮ ಅಥವಾ ಶ್ರೀ ಕೃಷ್ಣ, ಮಹಾದೇವಜಿ ಅಥವಾ ಓಂ ನಮಃ ಶಿವಾಯ ಆಶೀರ್ವಾದದಿಂದ ನಾನಿದನ್ನು ಮಾಡಿದೆ ಎಂದು ಯಾರಾದರೂ ಹಿಂದುಗಳು ಹೇಳಿದರೆ ಅದನ್ನು ಯಾರೂ ವಿರೋಧಿಸಬಾರದು. ಆದರೆ, ಜೈ ಶ್ರೀರಾಮ್ ಅಥವಾ ಹರ ಹರ ಮಹಾದೇವ್ ಅವರನ್ನು ಹೊಗಳುವುದು ವಿವಾದವನ್ನಾಗಿ ಮಾಡಿದ್ದಾರೆ. ಏಕೆಂದರೆ ಅವುಗಳನ್ನು ರಾಜಕೀಯ ಘೋಷಣೆಗಳನ್ನಾಗಿ ಬದಲಾಯಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಕಸ್ತೂರಿ, ಸರಿ. ನಾನು ಪ್ರಶ್ನೆಯನ್ನು ಮತ್ತೆ ಬರೆಯುತ್ತೇನೆ. ಯಾವುದೇ ಕ್ರಿಕೆಟಿಗ ಎಲ್ಲಿಯಾದರೂ ಶಿವನ ಕೃಪೆಯಿಂದ, ಹನುಮಂತ ನನ್ನ ಮೇಲೆ ದಯೆ ಇಟ್ಟನು ಹಾಗೂ ಸಾಯಿಬಾಬಾ ನಮಗೆ ಗೆಲುವು ತಂದುಕೊಟ್ಟರು ಎಂದು ಹೇಳಿದ್ದಾನೆಯೇ? ಆ ರೀತಿ ಹೇಳಿದರೆ ಪರಿಸ್ಥಿತಿ ಏನಾಗಿರುತ್ತದೆ ಎಂದು ಒಮ್ಮೆ ಊಹಿಸಿ. ಜೆಮಿಮಾಳ ನಂಬಿಕೆ ಬಗ್ಗೆ ನನಗೆ ಸಂತೋಷ ಇದೆ. ನಾವು ಇತರ ಭಾವನೆಗಳನ್ನೂ ಅದೇ ರೀತಿ ಏಕೆ ನಡೆಸಿಕೊಳ್ಳುವುದಿಲ್ಲ ಎಂದು ಯೋಚಿಸುತ್ತಿದ್ದೇನೆ ಎಂದು ಕಸ್ತೂರಿ ಉತ್ತರಿಸಿದ್ದಾರೆ. ಹೀಗೆ ಅನೇಕ ಮಂದಿ ಕಸ್ತೂರಿ ಅವರ ಟ್ವೀಟ್ಗೆ ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ. (ಏಜೆನ್ಸೀಸ್)