ಕ್ರೀಡೆ

ಜುಲಾನಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಿನೇಶ್​; ಬಳಿಕ ಹೇಳಿದ್ದಿಷ್ಟು

ಜಿಂದ್​: ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಕುಸ್ತಿಪಟು ವಿನೇಶ್​ ಪೋಗಟ್ ಬುಧವಾರ (ಸೆಪ್ಟೆಂಬರ್​ 11)​ ನಾಮಪತ್ರ ಸಲ್ಲಿಸಿದ್ದು, ನಮ್ಮ ಗೆಲುವು ಪಕ್ಕಾ ಎಂದು ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ವಿನೇಶ್​, ರಾಜಕೀಯಕ್ಕೆ ಬರುತ್ತಿರುವುದು ನನ್ನ ಸೌಭಾಗ್ಯ. ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಜುಲಾನಾ ಜನತೆ ನನಗೆ ತೋರಿಸುತ್ತಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್​ ನಾಯಕ ದೀಪಿಂದರ್​ ಹೂಡಾ ಮಾತನಾಡಿ, ಜುಲಾನಾ ಮಾತ್ರವಲ್ಲದೇ ಹರಿಯಾಣದಲ್ಲಿ ಕಾಂಗ್ರೆಸ್​ ಭರ್ಜರಿ ಜಯ ಸಾಧಿಸಲಿದ್ದು, ಕ್ರೀಡೆ ಮಾತ್ರವಲ್ಲದೇ ನಿಜಜೀವನದಲ್ಲೂ ಹೋರಾಟ ಮಾಡಿದ್ದಾರೆ. ಒಲಿಂಪಿಕ್ಸ್​ನಲ್ಲಿ ಅವರ ಹೋರಾಟ ಎಲ್ಲರಿಗೂ ಸ್ಪೂರ್ತಿಯಾಗಿದ ಎಂದಿದ್ದಾರೆ.

ವಿನೇಶ್ ವಿರುದ್ಧ ಜುಲಾನಾ ಕ್ಷೇತ್ರದಿಂದ ಕ್ಯಾ.ಯೋಗೇಶ್‌ ಬೈರಾಗಿ ಅವರನ್ನು ಬಿಜೆಪಿಯು ಕಣಕ್ಕೆ ಇಳಿಸಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ.