ಕ್ರೀಡೆ

ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಜಸ್​ಪ್ರೀತ್​ ಬುಮ್ರಾ ಲಭ್ಯತೆ ಬಗ್ಗೆ ಇಂದು ನಿರ್ಧಾರ

ನವದೆಹಲಿ: ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಮುಂಬರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಲಭ್ಯರಾಗುವರೇ, ಇಲ್ಲವೇ ಎಂಬುದು ಮಂಗಳವಾರ ಸ್ಪಷ್ಟವಾಗಲಿದೆ. ಮಿನಿ ವಿಶ್ವಕಪ್​ ಖ್ಯಾತಿಯ ಐಸಿಸಿ ಏಕದಿನ ಟೂರ್ನಿಗೆ ಎಲ್ಲ ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ಮಂಗಳವಾರ ಅಂತಿಮ ದಿನವಾಗಿದೆ. ಹೀಗಾಗಿ ಭಾರತ ಬುಮ್ರಾ ಫಿಟ್ನೆಸ್​ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಇತ್ತೀಚೆಗೆ ಬುಮ್ರಾ ಸ್ಕ್ಯಾನ್​ಗೆ ಒಳಗಾಗಿದ್ದು, ಬಿಸಿಸಿಐ ವೈದ್ಯಕಿಯ ತಂಡ ಈ ಬಗ್ಗೆ ಆಯ್ಕೆಗಾರರು ಮತ್ತು ಭಾರತ ತಂಡದ ಮ್ಯಾನೇಜ್​ಮೆಂಟ್​ಗೆ ಶೀಘ್ರದಲ್ಲೇ ಬುಮ್ರಾ ಫಿಟ್ನೆಸ್​ ಬಗ್ಗೆ ಅಂತಿಮ ವರದಿ ಸಲ್ಲಿಸಲಿದೆ.

ಕಳೆದ ಜನವರಿ 18ರಂದು ಭಾರತ, ಚಾಂಪಿಯನ್ಸ್​ ಟ್ರೋಫಿಗೆ ಪ್ರಕಟಿಸಿರುವ 15 ಆಟಗಾರರ ಸಂಭಾವ್ಯ ತಂಡದಲ್ಲಿ ಬುಮ್ರಾ ಸ್ಥಾನ ಪಡೆದಿದ್ದರು. ಇದೇ ತಂಡ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರೂ, ಬುಮ್ರಾ ಮಾತ್ರ ಹೊರಗುಳಿದಿದ್ದರು. ಬುಧವಾರ ಅಹಮದಾಬಾದ್​ನಲ್ಲಿ ನಡೆಯಲಿರುವ ಸರಣಿಯ ಕೊನೇ ಪಂದ್ಯದಲ್ಲಾದರೂ ಬುಮ್ರಾ ಆಡುವ ನಿರೀಕ್ಷೆ ಇತ್ತಾದರೂ, ಅವರು ಸದ್ಯ ಬೆಂಗಳೂರಿನಲ್ಲೇ ಇರುವುದು ಈ ಸಾಧ್ಯತೆಯನ್ನು ತಳ್ಳಿಹಾಕಿದೆ.

ವರ್ಷಾರಂಭದಲ್ಲಿ ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ ಸಿಡ್ನಿ ಟೆಸ್ಟ್​ನಲ್ಲಿ ಆಡುವ ವೇಳೆ ಬೆನ್ನುನೋವಿನ ಸಮಸ್ಯೆ ಎದುರಿಸಿದ್ದ ಬುಮ್ರಾ, ನಂತರದಲ್ಲಿ ಯಾವುದೇ ಪಂದ್ಯ ಆಡಿಲ್ಲ. ಅವರು ಕನಿಷ್ಠ 5 ವಾರಗಳ ವಿಶ್ರಾಂತಿಯ ಬಳಿಕ ಮರಳುವ ನಿರೀೆ ಇಡಲಾಗಿದ್ದರೂ, ಇದೀಗ ಆ ಅವಧಿ ಕೂಡ ಮೀರಿದೆ.

ಒಂದು ವೇಳೆ ಬುಮ್ರಾ ಈಗಲೇ ಪೂರ್ಣ ಫಿಟ್​ ಆಗದೆ, ಚಾಂಪಿಯನ್ಸ್​ ಟ್ರೋಫಿಯ ಆರಂಭಿಕ ಪಂದ್ಯಗಳ ನಂತರವಷ್ಟೇ ಆಡಲು ಲಭ್ಯರಾಗುವರು ಎಂದೆನಿಸಿದರೂ, ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಭಾರತ ತಂಡ ಫೆಬ್ರವರಿ 12ರ ನಂತರದಲ್ಲೂ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ಆದರೆ ಇದಕ್ಕೆ ಐಸಿಸಿಯ ತಾಂತ್ರಿಕ ಸಮಿತಿಯ ಒಪ್ಪಿಗೆ ಪಡೆಯಬೇಕಾಗುತ್ತದೆ.

ಹರ್ಷಿತ್​ ಬದಲಿ ಆಯ್ಕೆ?

ಹಾಲಿ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಬುಮ್ರಾ ಸ್ಥಾನದಲ್ಲಿ ಯುವ ವೇಗಿ ಹರ್ಷಿತ್​ ರಾಣಾ ಆಡುತ್ತಿದ್ದಾರೆ. ಚಾಂಪಿಯನ್ಸ್​ ಟ್ರೋಫಿಗೆ ಬುಮ್ರಾ ಅಲಭ್ಯರಾದರೂ ಹರ್ಷಿತ್​ ಅವರೇ ಬದಲಿ ಆಟಗಾರರಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ. ಫಿಟ್ನೆಸ್​ ಅಸ್ಪಷ್ಟತೆಯ ನಡುವೆಯೂ ಬುಮ್ರಾ ತಂಡದಲ್ಲಿ ಸ್ಥಾನ ಉಳಿಸಿಕೊಂಡರೆ, ಹರ್ಷಿತ್​ ಮೀಸಲು ಆಟಗಾರರಾಗಿ ದುಬೈಗೆ ಪ್ರಯಾಣಿಸಬಹುದು.

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಫೆಬ್ರವರಿ 19ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಶುರುವಾಗಲಿದ್ದು, ಭದ್ರತಾ ಭೀತಿಯಿಂದಾಗಿ ಭಾರತ ತಂಡ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ತಂಡ ಫೆಬ್ರವರಿ 20ರಂದು ಬಾಂಗ್ಲಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಬಳಿಕ ಫೆಬ್ರವರಿ 23ಕ್ಕೆ ಪಾಕಿಸ್ತಾನ ಮತ್ತು ಮಾರ್ಚ್​ 2ಕ್ಕೆ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ. ಸೆಮಿಫೈನಲ್​ಗೇರಿದರೆ ಮಾರ್ಚ್​ 4ರಂದು ಆಡಬೇಕಾಗುತ್ತದೆ. ಮಾರ್ಚ್​ 9ಕ್ಕೆ ಫೈನಲ್​ ನಡೆಯಲಿದೆ.