ಕ್ರೀಡೆ

ಅಂತಿಮ ಟೆಸ್ಟ್ ಪಂದ್ಯ ಆಡ್ತಾರಾ ಬುಮ್ರಾ..? ಕೋಚ್ ಸಿತಾಂಶು ಹೇಳಿದ್ದು ಹೀಗೆ! | Jasprit Bumrah

Jasprit Bumrah: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಜಸ್ಪ್ರೀತ್ ಬುಮ್ರಾ ಫಿಟ್ ಆಗಿದ್ದು, ಅವರ ಕಾರ್ಯಭಾರವನ್ನು ಗಮನದಲ್ಲಿಟ್ಟುಕೊಂಡು ಐದನೇ ಟೆಸ್ಟ್‌ಗೆ ಸೇರ್ಪಡೆ ಮಾಡಿಕೊಳ್ಳುವುದರ ಬಗ್ಗೆ ಯೋಚಿಸಲಾಗುವುದು ಎಂದು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಂಗಳವಾರ (ಜುಲೈ 29) ಮಾತನಾಡಿದ ಕೋಟಕ್, ಜಸ್ಪ್ರೀತ್ ಬುಮ್ರಾ ಸೇರ್ಪಡೆ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಅವರು ಪ್ರಸ್ತುತ ಫಿಟ್ ಆಗಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಬೌಲಿಂಗ್ ಮಾಡಿದ್ದು, ಮುಂದಿನ ಪಂದ್ಯದ ಬಗ್ಗೆ ಮುಖ್ಯ ತರಬೇತುದಾರರು, ಭೌತ ಚಿಕಿತ್ಸಕರು ಮತ್ತು ನಾಯಕನೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಬುಮ್ರಾ ಈ ಸರಣಿಯಲ್ಲಿ ಭಾರತದ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿದ್ದು , ಎರಡು ಐದು ವಿಕೆಟ್ ಗೊಂಚಲು ಸೇರಿದಂತೆ ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಾರ್ಡ್ಸ್ ಮತ್ತು ಹೆಡಿಂಗ್ಲಿಯಲ್ಲಿ ನಡೆದ ಆರಂಭಿಕ ಟೆಸ್ಟ್‌ಗಳಲ್ಲಿ, ಅವರು ವೇಗ ಮತ್ತು ನಿಖರತೆಯಿಂದ ದಾಳಿ ನಡೆಸಿದ್ದು, ನಿಯಮಿತವಾಗಿ ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್​ ಮಾಡಿದ್ದಾರೆ. ಆದರೆ, ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ, ಅವರು ಪ್ರದರ್ಶನ ತೃಪ್ತಿದಾಯಕವಾಗಿಲ್ಲ ಎನ್ನಲಾಗಿದೆ.

ಈ ಮೊದಲೇ ನಿರ್ಧರಿಸಿದಂತೆ ಬುಮ್ರಾ ಐದು ಟೆಸ್ಟ್‌ಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಆಡುವ ನಿರೀಕ್ಷೆಯಿತ್ತು. ಈಗಾಗಲೇ ನಾಲ್ಕು ಪಂದ್ಯಗಳು ಪೂರ್ಣಗೊಂಡಿದ್ದು, ಬುಮ್ರಾ ಮ್ಯಾಂಚೆಸ್ಟರ್‌ನಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಬೌಲಿಂಗ್ ಮಾಡಿರುವುದರಿಂದ, ಸರಣಿಯ ಅಂತಿಮ ಪಂದ್ಯದಲ್ಲಿ ಅವರನ್ನು ಸೇರಿಸಿಕೊಳ್ಳಲು ತಂಡ ಯೋಚಿಸುವ ಸಾಧ್ಯತೆ ಇದೆ.

ಭಾರತ ಸರಣಿಯನ್ನು 2-2 ಸಮಬಲಗೊಳಿಸಲು ಬುಮ್ರಾ ಉಪಸ್ಥಿತಿ ತುಂಬಾ ಮುಖ್ಯವಾಗಿದ್ದು, ತಂಡವು ಸೋಮವಾರ (ಜುಲೈ28) ಸಂಜೆ ಮ್ಯಾಂಚೆಸ್ಟರ್‌ನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿ ಮಂಗಳವಾರ ತರಬೇತಿಯನ್ನು ಪ್ರಾರಂಭಿಸಿದೆ. ವೈದ್ಯಕೀಯ ಸಿಬ್ಬಂದಿ ಪ್ರಕಾರ ಬುಮ್ರಾ ಫಿಟ್‌ ಆಗಿದ್ದರೂ, ಅವರನ್ನು ಆಡಿಸಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಳ್ಳಲಿದೆ. (ಏಜೆನ್ಸೀಸ್)