ಕ್ರೀಡೆ

ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಪುನರಾಗಮನಕ್ಕೆ 11ರ ನಂಟು!

ಡಬ್ಲಿನ್​: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 11ನೇ ನಾಯಕ ಎನಿಸಲು ವೇಗಿ ಜಸ್​ಪ್ರೀತ್​ ಬುಮ್ರಾ ಸಜ್ಜಾಗಿದ್ದಾರೆ. ಆತಿಥೇಯ ಐರ್ಲೆಂಡ್​ ವಿರುದ್ಧ ಶುಕ್ರವಾರದಿಂದ ನಡೆಯಲಿರುವ ಟಿ20 ಸರಣಿಯಲ್ಲಿ ಬುಮ್ರಾ ಈ ಮೈಲಿಗಲ್ಲು ನೆಡಲಿದ್ದಾರೆ. ಇದೇ ವೇಳೆ, ಬುಮ್ರಾ ಟೀಮ್​ ಇಂಡಿಯಾದ ನೆಟ್ಸ್​ನಲ್ಲಿ 11 ತಿಂಗಳ ಬಳಿಕ ಬೌಲಿಂಗ್​ ಅಭ್ಯಾಸ ನಡೆಸಿದ್ದಾರೆ. ಬುಮ್ರಾರ ಯಾರ್ಕರ್​ ಎಸೆತಗಳ ವಿಡಿಯೋವನ್ನು ಬಿಸಿಸಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಮಂಗಳವಾರವಷ್ಟೇ ಐರ್ಲೆಂಡ್​ ತಲುಪಿರುವ ಭಾರತ ತಂಡ ಬುಧವಾರ ಅಭ್ಯಾಸ ಆರಂಭಿಸಿದೆ.

ಕಳೆದ ವರ್ಷ ಸೆಪ್ಟೆಂಬರ್​ 25ರಂದು ಹೈದರಾಬಾದ್​ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದ 29 ವರ್ಷದ ಬುಮ್ರಾ ನಂತರದಲ್ಲಿ ಬೆನ್ನುನೋವಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಇದರಿಂದಾಗಿ ಅವರು ಟಿ20 ಏಷ್ಯಾಕಪ್​, ಟಿ20 ವಿಶ್ವಕಪ್​, ಆಸ್ಟ್ರೆಲಿಯಾ ವಿರುದ್ಧದ ಬಾರ್ಡರ್​-ಗಾವಸ್ಕರ್​ ಟ್ರೋಫಿ, ಐಪಿಎಲ್​-16, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಂಥ ಮಹತ್ವದ ಟೂರ್ನಿ-ಸರಣಿಗಳನ್ನು ತಪ್ಪಿಸಿಕೊಂಡಿದ್ದರು.

ಏಕದಿನ ಏಷ್ಯಾಕಪ್​ ಮತ್ತು ವಿಶ್ವಕಪ್​ಗೆ ಮುನ್ನ ಫಿಟ್ನೆಸ್​ ಸಾಬೀತುಪಡಿಸಲು ಐರ್ಲೆಂಡ್​ ವಿರುದ್ಧದ ಸರಣಿ ಬುಮ್ರಾಗೆ ಮಹತ್ವದ ಅವಕಾಶವೆನಿಸಿದೆ. ಜತೆಗೆ ನಾಯಕತ್ವ ಜವಾಬ್ದಾರಿಯೂ ಅವರ ಹೆಗಲೇರಿದೆ. ವೀರೇಂದ್ರ ಸೆಹ್ವಾಗ್​, ಎಂಎಸ್​ ಧೋನಿ, ಸುರೇಶ್​ ರೈನಾ, ಅಜಿಂಕ್ಯ ರಹಾನೆ, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಶಿಖರ್​ ಧವನ್​, ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ ಮತ್ತು ಕೆಎಲ್​ ರಾಹುಲ್​ ಭಾರತ ತಂಡವನ್ನು ಈ ಮುನ್ನ ಟಿ20 ಕ್ರಿಕೆಟ್​ನಲ್ಲಿ ಮುನ್ನಡೆಸಿರುವ ನಾಯಕರಾಗಿದ್ದಾರೆ.