ಕ್ರೀಡೆ

ಟೆಸ್ಟ್​​ ಕ್ರಿಕೆಟ್​ನಲ್ಲಿ 200 ವಿಕೆಟ್ ಸಾಧನೆ​; ಮೆಲ್ಬೋರ್ನ್​ನಲ್ಲಿ ಹೊಸ ವಿಶ್ವದಾಖಲೆ ಬರೆದ Jasprit Bumrah

ಮೆಲ್ಬೋರ್ನ್​: ಪ್ರಸ್ತುತ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ನಿತೀಶ್​ ರೆಡ್ಡಿ (Nitish Reddy) ಶತಕದ ಬಲದಿಂದ ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗಳಿಗೆ ಆಲೌಟ್​ ಆಗಿದ್ದು, 105ರನ್​ಗಳ ಹಿನ್ನಡೆಯನ್ನು ಅನುಭವಿಸಿದೆ. 240 ರನ್​ಗಳ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ದಿಟ್ಟ ತಿರುಗೇಟು ನೀಡಿರುವ ಭಾರತ ತಂಡವು ಚಹಾ ವಿರಾಮದ ವೇಳೆಗೆ 6 ವಿಕೆಟ್​ಗಳನ್ನು ಉರುಳಿಸುವ ಮೂಲಕ ಆತಿಥೇಯರಿಗೆ ದಿಟ್ಟ ತಿರುಗೇಟು ನೀಡಿದ್ದಾರೆ.

ಭಾರತದ ಪರ ಜಸ್ಪ್ರೀತ್​ ಬುಮ್ರಾ (Jasprit Bumrah) 4 ವಿಕೆಟ್​ಗಳನ್ನು ಪಡೆದಿದ್ದು, ಈ ಮೂಲಕ 200 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆಯೊಂದನ್ನು ಜಸ್ಪ್ರೀತ್​ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ನಾಲ್ಕು ವಿಕೆಟ್​ ಪಡೆದಿದ್ದ ಬುಮ್ರಾ (Jasprit Bumrah), ಎರಡನೇ ಇನ್ನಿಂಗ್ಸ್​ನಲ್ಲೂ ತಮ್ಮ ಮಾರಕ ದಾಳಿಯ ಮೂಲಕ ನಾಲ್ಕು ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಇತಿಹಾಸದಲ್ಲೇ ಅತ್ಯುತ್ತಮ ಆ್ಯವರೇಜ್​ನಲ್ಲಿ 200 ವಿಕೆಟ್​ ಪಡೆದ ವಿಶ್ವದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. ಇದಲ್ಲದೆ ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಗಳಿಸಿದ ವಿಶ್ವದ ನಾಲ್ಕನೇ ಬೌಲರ್ ಎಂಬ ಗೌರವಕ್ಕೆ ಬುಮ್ರಾ ಭಾಜನರಾಗಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ 200 ವಿಕೆಟ್​ ಕಬಳಿಸಿದ ಭಾರತದ 12ನೇ ಬೌಲರ್​ ಆಗಿದ್ದಾರೆ. ಇದಲ್ಲದೆ 19.56 ಸರಾಸರಿಯನ್ನು ಹೊಂದಿರುವ ಬುಮ್ರಾ ವೆಸ್ಟ್​ ಇಂಡೀಸ್​ನ ಜೋಯಲ್ ಗಾರ್ನರ್ 20.34 ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 200 ವಿಕೆಟ್​ ಪಡೆದ ಸಾಧನೆ ಮಾಡಿದ ವಿಶ್ವದ 82ನೇ ಬೌಲರ್ ಎಂಬ ಹೆಗ್ಗಳಿಕೆಗೂ ಜಸ್ಪ್ರೀತ್​ ಬುಮ್ರಾ ಪಾತ್ರರಾಗಿದ್ದಾರೆ.