ಕ್ರೀಡೆ

ಬೆಂಗಳೂರು ಚಳಿಗಾಲದ ಡರ್ಬಿಯಲ್ಲಿ ಜಮಾರಿಗೆ ಗೆಲುವಿನ ಗರಿ

ಬೆಂಗಳೂರು: ರೇಸ್​ ಕೋರ್ಸ್​ ಸ್ಥಳಾಂತರದ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ನಡುವೆ, ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ಬೆಂಗಳೂರಿನ ಚಳಿಗಾಲದ ಡರ್ಬಿ ಯಶಸ್ವಿಯಾಗಿ ಆಯೋಜನೆಗೊಂಡಿದೆ. ದಾಖಲೆಯ ಒಟ್ಟು 1.70 ಕೋಟಿ ರೂಪಾಯಿ ಬಹುಮಾನ ಮೊತ್ತದ ಪ್ರತಿಷ್ಠಿತ "ದಿ ವಿನ್​ಫೇರ್​ 247 ಬೆಂಗಳೂರು ಡರ್ಬಿಯಲ್ಲಿ ನಿರೀೆಯಂತೆಯೇ ಫೇವರಿಟ್​ ಜಮಾರಿ ಕುದುರೆ ಗೆಲುವಿನ ಕೇಕೆ ಹಾಕಿತು.

ಬೆಂಗಳೂರು ಟರ್ಫ್​ ಕ್ಲಬ್​ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ, ಕುದುರೆ ರೇಸ್​ ಕಣ್ತುಂಬಿಕೊಂಡರು. ಎಂದಿನಂತೆ ಈ ಬಾರಿಯೂ ಹೆಚ್ಚು ಗ್ಲಾಮರಸ್​ ಬೆಡಗಿಯರು ಪಾಲ್ಗೊಂಡು ರೇಸ್​ಗೆ ಮೆರುಗು ನೀಡಿದರು. ಆಕರ್ಷಕ ಉಡುಗೆಗಳನ್ನು ತೊಟ್ಟು ಕ್ಯಾಮರಾಗಳಿಗೆ ಪೋಸ್​ ನೀಡಿ, ನೆಚ್ಚಿನ ಕುದುರೆ ಓಡುವಾಗ ಪ್ರೋತ್ಸಾಹಿಸಿದರು.

ಜಾಕಿ ಪಿ. ಟ್ರೆವರ್​ ಸವಾರಿ ನಡೆಸಿದ ಮತ್ತು ಪಿ. ಶ್ರಾಫ್​ ತರಬೇತಿ ನೀಡಿದ ಜಮಾರಿ, 10 ಕುದುರೆಗಳ ಸ್ಪರ್ಧೆಯಲ್ಲಿ ಮೊದಲನೆಯದಾಗಿ ಓಟ ಮುಗಿಸಿ ತನ್ನ ಮಾಲೀಕರಿಗೆ 83.72 ಲಕ್ಷ ರೂ. ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದುಕೊಟ್ಟಿತು. ಫೈವ್​ ಸ್ಟಾರ್ಸ್​ ಶಿಪ್ಪಿಂಗ್​ ಕೋ. ಪೆವೇಟ್​ ಲಿಮಿಟೆಡ್​ ಸೇರಿದಂತೆ ವಿವಿಧ ವ್ಯಕ್ತಿಗಳ ಮಾಲೀಕತ್ವಕ್ಕೆ ಸೇರಿದ ಕಂದುಬಣ್ಣದ ಜಮಾರಿ ಕುದುರೆ, ಇತರ ಫೇವರಿಟ್​ಗಳಾದ ಟೆಹಾನಿ, ಸಂಥಿಂಗ್​ ರಾಯಲ್​, ಫಾಸ್ಟ್​ ಫೇಸ್​ ಕುದುರೆಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಅಲಂಕರಿಸಿತು.