ಮೊಹಾಲಿ: ತವರಿನ ವಿಶ್ವಕಪ್ಗೆ ಪೂರ್ವಭಾವಿಯಾಗಿ ಭಾರತ ತಂಡ 5 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಪ್ರವಾಸಿ ಆಸ್ಟ್ರೆಲಿಯಾ ತಂಡದ ವಿರುದ್ಧ ಸತ್ವಪರೀಕ್ಷೆಗೆ ಮುಂದಾಗಿದೆ. ಮೂರು ಪಂದ್ಯಗಳ ಈ ಸರಣಿಯು ವಿಶ್ವಕಪ್ಗೆ ಮುನ್ನ ಭಾರತಕ್ಕೆ ಕೊನೇ ಸವಾಲಾಗಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಬೆಂಚ್ ಸ್ಟ್ರೆಂತ್ ಪರೀಕ್ಷೆಗೆ ಉತ್ತಮ ಅವಕಾಶವೆನಿಸಿದೆ. ಕನ್ನಡಿಗರಾದ ರಾಹುಲ್ ದ್ರಾವಿಡ್ ಮಾರ್ಗದರ್ಶನ ಮತ್ತು ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವುದು ವಿಶೇಷವಾಗಿದೆ.
ಭಾರತ ತಂಡ ಏಷ್ಯಾಕಪ್ ಗೆದ್ದ ಜೋಶ್ನಲ್ಲಿ ಸರಣಿಗೆ ಸಜ್ಜಾಗಿದ್ದರೆ, ಆಸ್ಟ್ರೆಲಿಯಾ ತಂಡ ಇತ್ತೀಚೆಗೆ ದಣ ಆಫ್ರಿಕಾದಲ್ಲಿ ಮೊದಲ 2 ಪಂದ್ಯ ಗೆದ್ದರೂ, ನಂತರ 3 ಪಂದ್ಯ ಸೋತು ಏಕದಿನ ಸರಣಿ ಸೋತ ಹಿನ್ನಡೆ ಹೊಂದಿದೆ. ಆದರೆ ಆ ಸರಣಿ ತಪ್ಪಿಸಿಕೊಂಡಿದ್ದ ನಾಯಕ ಪ್ಯಾಟ್ ಕಮ್ಮಿನ್ಸ್ ಸಹಿತ ಕೆಲ ಆಟಗಾರರು ಈ ಸರಣಿಯಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್ನಲ್ಲಿ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೆಲಿಯಾ ತಂಡವನ್ನೇ ಎದುರಿಸುವ ಮೂಲಕ ಭಾರತ ತಂಡ ಅಭಿಯಾನ ಆರಂಭಿಸಲಿದೆ. ಹೀಗಾಗಿ ಈ ಸರಣಿಯ ಗೆಲುವು ಭಾರತಕ್ಕೆ ವಿಶ್ವಕಪ್ಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಲಿದೆ. ಜತೆಗೆ ಸರಣಿ ಗೆಲುವಿನಿಂದ ಭಾರತ, ವಿಶ್ವಕಪ್ನಲ್ಲಿ ವಿಶ್ವ ನಂ. 1 ತಂಡವಾಗಿಯೂ ಅಭಿಯಾನ ಆರಂಭಿಸುವ ಅವಕಾಶ ಪಡೆಯಲಿದೆ.
ಭಾರತದ ಪ್ರಮುಖರಿಗೆ ವಿಶ್ರಾಂತಿ
ಭಾರತ ತಂಡ ವಿಶ್ವಕಪ್ಗೆ ಪೂರ್ವಭಾವಿಯಾಗಿ ಆಸೀಸ್ ವಿರುದ್ಧದ ಸರಣಿಯ ಮೊದಲ 2 ಪಂದ್ಯಗಳಿಗೆ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಭರ್ಜರಿ ಫಾಮ್ರ್ನಲ್ಲಿರುವ ಸ್ಪಿನ್ನರ್ ಕುಲದೀಪ್ ಯಾದವ್ಗೆ ವಿಶ್ರಾಂತಿ ನೀಡಿದೆ.
ಅಶ್ವಿನ್-ವಾಷಿಂಗ್ಟನ್ ಆಯ್ಕೆ ಟ್ರಯಲ್ಸ್!
ಅಕ್ಷರ್ ಪಟೇಲ್ ಸೆಪ್ಟೆಂಬರ್ 28ರೊಳಗೆ ಫಿಟ್ ಆಗದಿದ್ದರೆ, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ತಮಿಳುನಾಡಿನ ಸ್ಪಿನ್ನರ್ಗಳಾದ ಆರ್. ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿ ಇದೆ. ಹೀಗಾಗಿ ಇಬ್ಬರಿಗೂ ಇದು ವಿಶ್ವಕಪ್ಗೆ "ಆಯ್ಕೆ ಟ್ರಯಲ್ಸ್' ಸರಣಿಯೂ ಆಗಿದೆ. 37 ವರ್ಷದ ಅಶ್ವಿನ್ 18 ತಿಂಗಳ ಬಳಿಕ ಏಕದಿನ ತಂಡಕ್ಕೆ ಮರಳಿದ್ದಾರೆ.
ಶ್ರೇಯಸ್, ಸೂರ್ಯಗೆ ಸವಾಲು
ಬೆನ್ನುನೋವು ಮರುಕಳಿಸಿದ ಕಾರಣ ಏಷ್ಯಾಕಪ್ನಲ್ಲಿ ಒಂದೇ ಪಂದ್ಯ ಆಡಿ ಹೊರಗುಳಿದ ಶ್ರೇಯಸ್ ಅಯ್ಯರ್ಗೆ ಫಿಟ್ನೆಸ್ ಸಾಬೀತುಪಡಿಸಲು ಮತ್ತು ಮತ್ತು ಏಕದಿನ ಕ್ರಿಕೆಟ್ನಲ್ಲಿ ಸಾಮರ್ಥ್ಯ ನಿರೂಪಿಸಲು ವಿಶ್ವ ನಂ. 1 ಟಿ20 ಬ್ಯಾಟರ್ ಸೂರ್ಯಕುಮಾರ್ಗೆ ಈ ಸರಣಿ ಉತ್ತಮ ಅವಕಾಶವಾಗಿದೆ. ಮಾರ್ಚ್ನಲ್ಲಿ ಆಸೀಸ್ ವಿರುದ್ಧದ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಸೂರ್ಯಕುಮಾರ್ ಈ ಬಾರಿ ಲಯಕಂಡುಕೊಳ್ಳಬೇಕಿದೆ.
ಆಸೀಸ್ಗೆ ಗಾಯದ ಹಿನ್ನಡೆ
ಆಸ್ಟ್ರೆಲಿಯಾ ತಂಡ ವಿಶ್ವಕಪ್ಗೆ ಪೂರ್ವಭಾವಿಯಾಗಿ ಕೆಲ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿರುವುದರಿಂದ ಪೂರ್ಣ ಬಲದೊಂದಿಗೆ ಕಣಕ್ಕಿಳಿಯುತ್ತಿಲ್ಲ. ಸ್ಟಾರ್ಕ್, ಮ್ಯಾಕ್ಸ್ವೆಲ್ ಫಿಟ್ನೆಸ್ ಸಮಸ್ಯೆ ಹೊಂದಿದ್ದರೆ, ಟ್ರಾವಿಸ್ ಹೆಡ್ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಮಾರ್ನಸ್ ಲಬುಶೇನ್ ವಿಶ್ವಕಪ್ ತಂಡದಲ್ಲಿರದಿದ್ದರೂ, ಹಾಲಿ ತಂಡದಲ್ಲಿ ಪ್ರಮುಖ ಸದಸ್ಯರೆನಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ ತಪ್ಪಿಸಿಕೊಂಡಿದ್ದ ಕಮ್ಮಿನ್ಸ್, ಸ್ಟೀವನ್ ಸ್ಮಿತ್ ಈ ಸರಣಿಗೆ ಫಿಟ್ ಆಗಿದ್ದಾರೆ.
ಟೀಮ್ ನ್ಯೂಸ್
ಭಾರತ: ಹಾರ್ದಿಕ್ ಪಾಂಡ್ಯಗೆ ಮೊದಲ 2 ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿರುವುದರಿಂದ ಭಾರತ ಮೂವರು ಸ್ಪಿನ್ನರ್ಗಳನ್ನು (ಜಡೇಜಾ, ವಾಷಿಂಗ್ಟನ್, ಅಶ್ವಿನ್) ಕಣಕ್ಕಿಳಿಸಬಹುದು. ಏಷ್ಯಾಕಪ್ ಫೈನಲ್ ಪಂದ್ಯದ ಅಮೋಘ ನಿರ್ವಹಣೆಯ ಹಿನ್ನೆಲೆಯಲ್ಲಿ ಮೊಹಮದ್ ಸಿರಾಜ್ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ. ರೋಹಿತ್ ಗೈರಿನಲ್ಲಿ ಶುಭಮಾನ್ ಗಿಲ್ ಜತೆಗೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಲಿದ್ದರೆ, ಕೊಹ್ಲಿ ಗೈರಿನಲ್ಲಿ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಆಡಬಹುದು.
ಸಂಭಾವ್ಯ ತಂಡ: ಇಶಾನ್ ಕಿಶನ್, ಶುಭಮಾನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್, ಕೆಎಲ್ ರಾಹುಲ್ (ನಾಯಕ, ವಿ.ಕೀ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಮೊಹಮದ್ ಶಮಿ, ಮೊಹಮದ್ ಸಿರಾಜ್/ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ.
ಆಸ್ಟ್ರೆಲಿಯಾ: ನಾಯಕ ಪ್ಯಾಟ್ ಕಮ್ಮಿನ್ಸ್ ಪಂದ್ಯಕ್ಕೆ ಫಿಟ್ ಆಗಿದ್ದರೆ, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಇನ್ನೂ ಪೂರ್ಣ ಫಿಟ್ ಆಗದ ಕಾರಣ ಅಲಭ್ಯರಾಗಿದ್ದಾರೆ. ಭಾರತ ಮೂಲದ ಯುವ ಸ್ಪಿನ್ನರ್ ತನ್ವೀರ್ ಸಂ ಆಡುವ ನಿರೀಕ್ಷೆ ಇದೆ.
ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ (ವಿ.ಕೀ), ಕ್ಯಾಮರಾನ್ ಗ್ರೀನ್, ಮಾರ್ಕಸ್ ಸ್ಟೋಯಿನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಪೆನ್ಸರ್ ಜಾನ್ಸನ್/ತನ್ವೀರ್ ಸಂ, ಆಡಂ ಜಂಪಾ, ಜೋಶ್ ಹ್ಯಾಸಲ್ವುಡ್.
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
ಮುಖಾಮುಖಿ: 146
ಭಾರತ: 54
ಆಸ್ಟ್ರೆಲಿಯಾ: 82
ರದ್ದು: 10
*ಭಾರತದಲ್ಲಿ: 67
ಭಾರತ: 30
ಆಸ್ಟ್ರೆಲಿಯಾ: 32
ರದ್ದು: 5
6: ಭಾರತ ತಂಡ ಮೊಹಾಲಿಯಲ್ಲಿ ಆಸ್ಟ್ರೆಲಿಯಾ ವಿರುದ್ಧ 6 ಏಕದಿನ ಪಂದ್ಯವಾಡಿದ್ದು, 1ರಲ್ಲಿ ಮಾತ್ರ ಗೆದ್ದು, 5ರಲ್ಲಿ ಸೋತಿದೆ. ರಲ್ಲೂ ಗೆಲುವು ದಾಖಲಿಸಿದೆ. 2019ರಲ್ಲಿ ಇಲ್ಲಿ ನಡೆದ ಕೊನೇ ಮುಖಾಮುಖಿಯಲ್ಲಿ ಆಸೀಸ್ 359 ರನ್ ಗುರಿ ಚೇಸ್ ಮಾಡಿ ಗೆದ್ದಿತ್ತು.
*ರನ್ಮಳೆ ನಿರೀಕ್ಷೆ
ಮುಂಬರುವ ವಿಶ್ವಕಪ್ ಆತಿಥ್ಯದಿಂದ ವಂಚಿತವಾಗಿರುವ ಮೊಹಾಲಿಯ ಪಿಸಿಎ ಕ್ರೀಡಾಂಗಣಕ್ಕೆ ಈ ಪಂದ್ಯ ಸಮಾಧಾನಕರ ಕೊಡುಗೆಯಾಗಿದೆ. 4 ವರ್ಷಗಳ ಬಳಿಕ ಇಲ್ಲಿ ಏಕದಿನ ಪಂದ್ಯ ಆಯೋಜನೆಗೊಂಡಿದೆ. ಇತ್ತೀಚೆಗೆ ಇಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ದೊಡ್ಡ ಮೊತ್ತಗಳು ದಾಖಲಾಗಿದ್ದವು. ಹೀಗಾಗಿ ಈ ಪಂದ್ಯದಲ್ಲೂ ರನ್ಪ್ರವಾಹ ನಿರೀಸಲಾಗಿದೆ.
1: ಭಾರತ ತಂಡ ಮೊಹಾಲಿಯಲ್ಲಿ ಗೆದ್ದರೆ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದು, ಏಕಕಾಲದಲ್ಲಿ ಮೂರೂ ಮಾದರಿಯಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ವಿಶೇಷ ಸಾಧನೆ ಮಾಡಲಿದೆ.
ಶುಭಮಾನ್ ಗಿಲ್ಗೂ ವಿಶ್ವ ನಂ. 1 ಚಾನ್ಸ್
ಐಸಿಸಿ ರ್ಯಾಂಕಿಂಗ್ನ ಟಿ20 ಬ್ಯಾಟರ್, ಏಕದಿನ ಬೌಲರ್, ಟೆಸ್ಟ್ ಬೌಲರ್, ಟೆಸ್ಟ್ ಆಲ್ರೌಂಡರ್ಗಳಲ್ಲಿ ಕ್ರಮವಾಗಿ ಸೂರ್ಯಕುಮಾರ್, ಮೊಹಮದ್ ಸಿರಾಜ್, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ವಿಶ್ವ ನಂ. 1 ಆಗಿದ್ದು, ಇದೀಗ ಶುಭಮಾನ್ ಗಿಲ್ಗೆ ಏಕದಿನ ಬ್ಯಾಟರ್ಗಳಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶ ಎದುರಾಗಿದೆ. ಹಾಲಿ ನಂ. 1 ಬಾಬರ್ ಅಜಮ್ಗಿಂತ (857) ಗಿಲ್ (814) ಕೇವಲ 43 ಅಂಕ ಹಿಂದಿದ್ದು, ಆಸೀಸ್ ವಿರುದ್ಧ ಸರಣಿಯಲ್ಲಿ 200 ಪ್ಲಸ್ ರನ್ ಗಳಿಸಿದರೆ ವಿಶ್ವಕಪ್ಗೆ ಮುನ್ನ ವಿಶ್ವದ ನಂ. 1 ಏಕದಿನ ಬ್ಯಾಟರ್ ಎನಿಸಲಿದ್ದಾರೆ.