ಕ್ರೀಡೆ

ಶ್ರೀಶಾಂತ್ ಸೇರ್ಪಡೆಗೆ ಹಲವು ಐಪಿಎಲ್ ತಂಡಗಳ ಆಸಕ್ತಿ!

ಕೊಚ್ಚಿ: ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರು ಈಗ ನಿಷೇಧ ಮುಕ್ತರಾಗಿ ದೇಶೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿದ್ದಾರೆ. ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲೂ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಹೀಗಾಗಿ, ವಿವಿಧ ಐಪಿಎಲ್ ತಂಡಗಳು ತಮ್ಮನ್ನು ಸಂಪರ್ಕಿಸುತ್ತಿವೆ ಎಂದು 37 ವರ್ಷದ ಶ್ರೀಶಾಂತ್ ಹೇಳಿಕೊಂಡಿದ್ದಾರೆ.

ಎಸ್. ಶ್ರೀಶಾಂತ್ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ನಿಷೇಧ ಕಳೆದ ಸೆಪ್ಟೆಂಬರ್‌ನಲ್ಲಿ ಕೊನೆಗೊಂಡಿದೆ. ಮುಂದಿನ ವರ್ಷದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ಅವರು ಈಗಾಗಲೆ ಕೇರಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘ಮುಷ್ತಾಕ್ ಅಲಿ ಟ್ರೋಫಿ ಮಾತ್ರವಲ್ಲದೆ ರಣಜಿ-ಇರಾನಿ ಟ್ರೋಫಿಗಳಲ್ಲಿ ಆಡುವುದನ್ನೂ ನಾನು ಎದುರು ನೋಡುತ್ತಿದ್ದೇನೆ. ನಾನು ಉತ್ತಮ ನಿರ್ವಹಣೆ ತೋರಿದಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರಲಿವೆ. ಐಪಿಎಲ್‌ನ ವಿವಿಧ ತಂಡಗಳಿಂದಲೂ ನನ್ನನ್ನು ಸಂಪರ್ಕಿಸಲಾಗುತ್ತಿದೆ. ನಾನು ಫಿಟ್ ಆಗಿದ್ದರೆ, ಉತ್ತಮ ಬೌಲಿಂಗ್ ಮಾಡುವ ವಿಶ್ವಾಸವಿದೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

ನಿಷೇಧದಿಂದಾಗಿ ಕ್ರಿಕೆಟ್ ಆಡದಿದ್ದ ದಿನಗಳಲ್ಲಿ ಬಾಲಿವುಡ್ ಸಹಿತ ಹಲವು ಚಿತ್ರರಂಗಗಳಲ್ಲಿ ಶ್ರೀಶಾಂತ್ ನಟಿಸಿದ್ದರು. ಹೀಗಾಗಿ ಅಲ್ಲಿನ ಪಾತ್ರಕ್ಕಾಗಿ ದೇಹತೂಕವನ್ನು ಹೆಚ್ಚಿಸಿಕೊಂಡಿದ್ದರು. ಬಳಿಕ ನಿಷೇಧ ಮುಕ್ತರಾಗಿ ಕ್ರಿಕೆಟ್‌ಗೆ ಮರಳುವ ಮುನ್ನ ಸುಮಾರು 20ಕೆಜಿ ದೇಹತೂಕವನ್ನು ಕರಗಿಸಿಕೊಳ್ಳಬೇಕಾಯಿತು ಎಂದು ಶ್ರೀಶಾಂತ್ ಹೇಳಿದ್ದಾರೆ.

35ರ ನಂತರ ಕ್ರೀಡೆಯಲ್ಲಿ ಸಾಧನೆ ತೋರುವುದು ಕಠಿಣವೆನಿಸಿದ್ದರೂ, ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಮತ್ತು ಲಿಯಾಂಡರ್ ಪೇಸ್ ಅವರಂಥ ಕ್ರೀಡಾಪಟುಗಳು ತಮಗೆ ಮಾದರಿಯಾಗಿದ್ದಾರೆ. ಪೇಸ್ 42ನೇ ವಯಸ್ಸಿನಲ್ಲಿ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದರು ಎಂದಿರುವ ಶ್ರೀಶಾಂತ್, 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಗುರಿ ಇಟ್ಟುಕೊಂಡಿದ್ದಾರೆ.