ಕ್ರೀಡೆ

ಆತನದ್ದು ಯಾವ ತಪ್ಪೂ ಇಲ್ಲ; ಇದು ತಾಂತ್ರಿಕ​ ಸಮಸ್ಯೆ! ಇಶಾನ್ ಕಿಶನ್​ ಪರ ಬ್ಯಾಟ್ ಬೀಸಿದ ಮಾಜಿ ಕ್ರಿಕೆಟಿಗ | Ishan Kishan

Ishan Kishan: ನಿನ್ನೆ (ಏಪ್ರಿಲ್​ 23) ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಇಶಾನ್ ಕಿಶನ್​ ಸಂಪೂರ್ಣವಾಗಿ ವಿಫಲಗೊಂಡರು. ನಾಲ್ಕು ಎಸೆತಗಳನ್ನು ಆಡಿ ಪೆವಿಲಿಯನ್​ನತ್ತ ಸಾಗಿದ ಕಿಶನ್​, ಔಟ್ ಆದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಭಾರೀ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೂ ಗ್ರಾಸವಾಗಿದೆ.

ಹಿಂದೆಂದೂ ಈ ರೀತಿ ಯಾವೊಬ್ಬ ಅಂಪೈರ್​ ಕೂಡ ಔಟ್​ ಕೊಟ್ಟಿರಲಿಲ್ಲ. ಇದು ಬಹುತೇಕರನ್ನು ಅನುಮಾನಕ್ಕೆ ದೂಡಿತು. ಕಿಶನ್​ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ಗೊಂದಲದಲ್ಲೇ ಕೈಮೇಲಕ್ಕೆತ್ತಿದ ಅಂಪೈರ್​, ಔಟ್​ ಘೋಷಿಸುವುದೋ ಬಿಡುವುದೋ ಎಂಬ ರೀತಿಯಲ್ಲಿ ತಮ್ಮ ನಿರ್ಣಯ ತಿಳಿಸಿದರು. ಬ್ಯಾಟ್​ ಬಾಲ್​ಗೆ ಟಚ್ ಆಗದೆ ಇದ್ದರೂ ಔಟ್ ಎಂಬ ಘೋಷಣೆ ಫಿಕ್ಸಿಂಗ್​ ಆರೋಪವನ್ನು ಮುನ್ನೆಲೆಗೆ ತಂದಿದೆ.

ಇಶಾನ್ ಕಿಶನ್​ ಪೆವಿಲಿಯನ್​ನತ್ತ ಸಾಗಿದ್ದನ್ನು ಕಂಡ ಕ್ರಿಕೆಟ್​ ಪ್ರೇಮಿಗಳು, ಅಂಪೈರ್​ ಮತ್ತು ಕಿಶನ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಕಿಶನ್​ ವಿರುದ್ಧ ಕಿಡಿಕಾರಿದವರಿಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಇಲ್ಲಿ ಕಿಶನ್​ ಅವರದ್ದೇನು ತಪ್ಪಿಲ್ಲ ಎಂದಿದ್ದಾರೆ.

"ಆ ಸಂದರ್ಭದಲ್ಲಿ ಅಲ್ಟ್ರಾ ಎಡ್ಜ್​ನಲ್ಲಿ ಏನೋ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇಶಾನ್​ಗೆ ತನ್ನ ಬ್ಯಾಟ್​ ಬಾಲ್​ಗೆ ತಗುಲಿದೆ ಎಂದು ಅನಿಸಿದೆ. ಹೀಗಾಗಿ ತಕ್ಷಣವೇ ಅಲ್ಲಿಂದ ಹೊರ ನಡೆದಿದ್ದಾರೆ. ಅದೇ ಬ್ಯಾಟ್​ ಪ್ಯಾಡ್​ ಮತ್ತು ಬಾಲ್​ಗೆ ಟಚ್ ಆಗಿದಿದ್ದರೆ ಖಂಡಿತ ಅಲ್ಲೊಂದು ಗೊಂದಲ ಇರುತ್ತಿತ್ತು. ಇಲ್ಲಿ ತಾಂತ್ರಿಕ ಸಮಸ್ಯೆಯಿಂದ ಕಿಶನ್ ಔಟ್ ಆಗಿದ್ದಾರೆ" ಎಂದು ರಾಯುಡು ಹೇಳಿದ್ದಾರೆ,(ಏಜೆನ್ಸೀಸ್).