ಕ್ರೀಡೆ

ಖಾಲಿ ಕ್ರೀಡಾಂಗಣದಲ್ಲಿ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್..!

ನವದೆಹಲಿ: 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯನ್ನು ಖಾಲಿ ಸ್ಟೇಡಿಯಂಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳವರೆಗೆ ಟೂರ್ನಿ ನಡೆಯಲಿದ್ದು, ಬಹುತೇಕ ಖಾಲಿ ಸ್ಟೇಡಿಯಂಗಳಲ್ಲೇ ಪಂದ್ಯಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ದೇಶದಾದ್ಯಂತ ಕರೊನಾ ವೈರಸ್ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಕರೊನಾ ವೈರಸ್ ಭೀತಿ ಕಡಿಮೆ ಪ್ರಮಾಣದಲ್ಲಿರುವ 2 ರಾಜ್ಯಗಳಲಷ್ಟೇ ಲೀಗ್ ಆಯೋಜಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಲೀಗ್ ನಡೆಯುವ ಸಾಧ್ಯತೆಗಳಿವೆ. ಸೋಮವಾರ ನಡೆದ ಐಎಸ್‌ಎಲ್ ಆಯೋಜಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಅಭಿವೃದ್ಧಿ ಲಿಮಿಟೆಡ್ ಹಾಗೂ ಕ್ಲಬ್ ಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಖಾಲಿ ಸ್ಟೇಡಿಯಂನಲ್ಲಿ ಲೀಗ್ ಆಯೋಜಿಸಲಾಗುತ್ತಿದ್ದು, ನವೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಟೂರ್ನಿ ನಡೆಯಲಿದೆ. ಕೇರಳ, ಗೋವಾ, ಪಶ್ಚಿಮ ಬಂಗಾಳ ಹಾಗೂ ನಾರ್ಥ್‌ಈಸ್ಟ್ ಭಾಗದಲ್ಲಿ ಪರಿಗಣಿಸಲಾಗಿದ್ದು, ಗೋವಾ ಹಾಗೂ ಕೇರಳದಲ್ಲಿ ಟೂರ್ನಿ ನಡೆಯುವ ಸಾಧ್ಯತೆಗಳಿವೆ ಎಂದು ಐಎಸ್‌ಎಲ್ ಮೂಲಗಳು ತಿಳಿಸಿವೆ. ಒಂದು ಅಥವಾ ಎರಡು ರಾಜ್ಯಗಳಲ್ಲಿ ಟೂರ್ನಿ ಆಯೋಜಿಸಿದರೂ ವಿವಿಧ ಕ್ರೀಡಾಂಗಣದಲ್ಲಿ ಲೀಗ್ ನಡೆಯಲಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ, ಗೋವಾದ ಪರಿಸ್ಥಿತಿ ಉತ್ತಮವಾಗಿದೆ ಎನ್ನುವುದು ಆಯೋಜಕರ ವಾದ. ಟೂರ್ನಿ ಆಯೋಜಿಸುವುದಕ್ಕೂ ಮುನ್ನ ಕೇಂದ್ರ ಹಾಗೂ ಸ್ಥಳೀಯ ಸರ್ಕಾರದ ಜತೆ ಚರ್ಚಿಸಿದ ಬಳಿಕವೇ ಟೂರ್ನಿ ಆಯೋಜಿಸುವ ಕುರಿತು ರೂಪು ರೇಷೆ ಸಿದ್ಧಪಡಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಈಶಾನ್ಯ ಭಾಗದಲ್ಲಿ ಐಜ್ವಾಲ್, ಇಂಫಾಲ್, ಶಿಲ್ಲಾಂಗ್, ಗುವಾಹಟಿ ಹಾಗೂ ಗಾಂಗ್ಟಕ್, ಇಲ್ಲವೇ ಕೋಲ್ಕತ ಸ್ಥಳದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ಮಾರ್ಚ್ 14 ರಂದು 6ನೇ ಆವೃತ್ತಿಯ ಐಎಸ್‌ಎಲ್ ಫೈನಲ್ ಪಂದ್ಯ ಗೋವಾದಲ್ಲಿ ಖಾಲಿ ಸ್ಟೇಡಿಯಂನಲ್ಲಿ ನಡೆಯಿತು. ಎಟಿಕೆ ತಂಡ, ಚೆನ್ನೈ ಎಫ್ ಸಿ ತಂಡವನ್ನು ಮಣಿಸಿ 3ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.