ಚೆನ್ನೈ: ಕಾಲಿವುಡ್ನಲ್ಲಿ ಶ್ರೀಲಂಕನ್ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಕುರಿತ ಸಿನಿಮಾ ಸೆಟ್ಟೇರಿದೆ. ವಿಜಯ್ ಸೇತುಪತಿ ಮುತ್ತಯ್ಯನ ಪಾತ್ರ ನಿಭಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿ ಕುತೂಹಲ ಮೂಡಿಸಿತ್ತು. ಆದರೆ, ಈ ಚಿತ್ರಕ್ಕೆ ನೆಗೆಟಿವ್ ಕಮೆಂಟ್ಗಳೂ ಹರಿದು ಬಂದಿದ್ದವು. ಇದೀಗ ಅದೆಲ್ಲವನ್ನು ಕಂಡು ಸ್ವತಃ ಮುತ್ತಯ್ಯ ಪ್ರತಿಕ್ರಿಯಿಸಿದ್ದಾರೆ.
'ನಾನು ಶ್ರೀಲಂಕಾದ ಕ್ರಿಕೆಟ್ ತಂಡದ ಭಾಗವಾಗಿದ್ದರಿಂದ ನನ್ನನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಭಾರತದಲ್ಲಿ ಜನಿಸಿದ್ದರೆ, ನಾನು ಭಾರತೀಯ ಕ್ರಿಕೆಟ್ ತಂಡದ ಭಾಗವಾಗಲು ಪ್ರಯತ್ನಿಸುತ್ತಿದ್ದೆ. ನಾನು ಶ್ರೀಲಂಕಾದಲ್ಲಿ ತಮಿಳಿಗನಾಗಿ ಜನಿಸಿದ್ದು ನನ್ನ ತಪ್ಪೇ?’ ಎಂದು ಪ್ರಶ್ನಿಸಿದ್ದಾರೆ.
‘ನನ್ನ ಬಗ್ಗೆ ಗೊತ್ತಿಲ್ಲದ ಜನ ಸುಮ್ಮನೇ ಏನೆನೋ ಪುಕಾರು ಸೃಷ್ಟಿಸುತ್ತಿದ್ದಾರೆ. ಒಂದಷ್ಟು ರಾಜಕೀಯ ಪಕ್ಷಗಳು ನನ್ನನ್ನು ತಮಿಳು ಸಮುದಾಯ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಘಾಸಿಯಾಗಿದೆ. ನನ್ನ ಬಗೆಗಿನ ಸುಳ್ಳು ಮಾಹಿತಿಗಳನ್ನು ಮಾತ್ರ ಹರಿಬಿಡಲಾಗುತ್ತಿದೆ’ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಸೇತುಪತಿ ವಿರುದ್ಧ ಶೇಮ್ ಆನ್ ವಿಜಯ್ ಸೇತುಪತಿ ಎಂಬ ಅಭಿಯಾನವೇ ಶುರುವಾಗಿದ್ದು, ಟ್ರೆಂಡ್ ಆಗುತ್ತಿದೆ. ಮುತ್ತಯ್ಯ ಮುರಳೀಧರ್ ಕುರಿತ ಬಯೋಪಿಕ್ನಲ್ಲಿ ವಿಜಯ್ ಸೇತುಪತಿ ನಟಿಸುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತಿದ್ದಂತೆ ಈ ವಿವಾದ ಹುಟ್ಟುಕೊಂಡಿದೆ.
ಪ್ರಮುಖವಾಗಿ ಮುತ್ತಯ್ಯ ಮುರಳೀಧರ್ ಅವರು ಶ್ರೀಲಂಕಾದ ತಮಿಳರ ಮೇಲೆ ದೌರ್ಜನ್ಯಗಳಾದಾಗ ಯಾವತ್ತೂ ಪ್ರತಿಭಟಿಸಿರಲಿಲ್ಲವಂತೆ. ಕನಿಷ್ಠ ಪಕ್ಷ ಆ ವಿಷಯದ ಕುರಿತಾದ ಒಮ್ಮೆಯೂ ಮಾತನಾಡಿರಲಿಲ್ಲವಂತೆ. ಹೀಗಿರುವಾಗ ಅಂಥವರ ಬಗ್ಗೆ ಸಿನಿಮಾ ಆಗುತ್ತಿರುವುದು ಮತ್ತು ಮುತ್ತಯ್ಯನ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿರುವುದು ಹಲವರಿಗೆ ಬೇಸರವಾಗಿದೆ. ಅದೇ ಕಾರಣಕ್ಕೆ, ವಿಜಯ್ ಸೇತುಪತಿ ಕುರಿತಾಗಿ ಆಕ್ರೋಶ ಹೆಚ್ಚಾಗಿದೆ. (ಏಜೆನ್ಸೀಸ್)